ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರದ ಜನಗಣತಿ ಕಾರ್ಯಕ್ರಮದ ಎರಡನೇ ಹಂತವು ಜನವರಿಯಿಂದ ಆರಂಭವಾಗುತ್ತಿದ್ದು, ಮುಂಬರು ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪಬ್ಲಿಕ್ ಪರೀಕ್ಷೆಗಳು ಪೋಸ್ಟ್ಪೋನ್ ಆಗುವ ದಟ್ಟ ಸಾಧ್ಯತೆ ಇದೆ.
ಶಿಕ್ಷಕರನ್ನು ಜನಗಣತಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಆದೇಶ ನೀಡಲಾಗಿದೆ. ಇದೇ ಕಾರಣದಿಂದ ಪರೀಕ್ಷಾ ದಿನಾಂಕಗಳಲ್ಲಿ ಬದಲಾವಣೆ ಮಾಡುವಂತೆ ಶಾಲಾ ಶಿಕ್ಷಣ ಇಲಾಖೆಗೆ ಕೇಂದ್ರ ಜನಗಣತಿ ಕಾರ್ಯಾಚರಣೆ ನಿರ್ದೇಶನಾಲಯ ಪತ್ರದ ಮೂಲಕ ಮನವಿ ಮಾಡಿದೆ.
ಇದಕ್ಕೆ ಒಪ್ಪಿಗೆ ದೊರೆತಲ್ಲಿ ಪರೀಕ್ಷೆಗಳು ಪೋಸ್ಟ್ಪೋನ್ ಆಗಲಿದ್ದು, ಶೀಘ್ರವೇ ಹೊಸ ವೇಳಾಪಟ್ಟೆ ಆಗಮಿಸಲಿದೆ. ಕೇಂದ್ರ ಸರ್ಕಾರದ ಯೋಜನೆಯಂತೆ ಜನಗಣತಿಯ ಎರಡನೇ ಸುತ್ತಿನ ಕಾರ್ಯಚರಣೆಯು ಜನವರಿ 25ರಿಂದ ಆರಂಭಗೊಂಡು ಫೆಬ್ರವರಿ 28ರವರೆಗೆ ನಡೆಯಲಿದೆ.
ಮಾರ್ಚ್ ಒಂದರಿಂದ ಮಾರ್ಚ್ ಐದರವರೆಗೆ ಪರಿಷ್ಕರಣಾ ಸುತ್ತು ನಡೆಯಲಿದೆ. ಈ ಸಮಯದಲ್ಲೇ ಪರೀಕ್ಷೆಗಳೂ ಎದುರಾಗುವುದರಿಂದ ಶಿಕ್ಷಕರ ನಿಯೋಜನೆ ಹಾಗೂ ಪರೀಕ್ಷಾ ನಿರ್ವಹಣೆಗೆ ತೊಡಕಾಗಬಾರದೆಂಬ ಉದ್ದೇಶದಿಂದ ಪರೀಕ್ಷೆಗಳನ್ನು ಮುಂದೂಡುವಂತೆ ಮನವಿ ಸಲ್ಲಿಕೆಯಾಗಿದೆ.



