October 23, 2026
Friday, October 23, 2026
spot_img

ಹಾಸ್ಟೆಲ್‌ಗಳಲ್ಲಿ ಆತ್ಮಹ*ತ್ಯೆ ತಡೆಗೆ ಹೊಸ ಪ್ರಯತ್ನ: 354 ಸ್ಪೆಷಲ್ ಫ್ಯಾನ್‌ ಅಳವಡಿಸಿದ ಗುಜರಾತ್‌ ವಿಶ್ವವಿದ್ಯಾಲಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿದ್ಯಾರ್ಥಿಗಳ ಸುರಕ್ಷತೆಗೆ ಹೊಸ ಕ್ರಮ ಕೈಗೊಂಡಿರುವ ಗುಜರಾತ್‌ನ ಸೂರತ್‌ನಲ್ಲಿರುವ ವೀರ್ ನರ್ಮದ್ ದಕ್ಷಿಣ ಗುಜರಾತ್ ವಿಶ್ವವಿದ್ಯಾಲಯವು ತನ್ನ ಹಾಸ್ಟೆಲ್‌ಗಳಲ್ಲಿ 354 ವಿಶೇಷ ಸುರಕ್ಷತಾ ಫ್ಯಾನ್‌ಗಳನ್ನು ಅಳವಡಿಸಿದೆ.

ಹೌದು! ವಿದ್ಯಾರ್ಥಿಗಳ ಆತ್ಮಹತ್ಯೆ ಅಪಾಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಸ್ಪ್ರಿಂಗ್‌ ವ್ಯವಸ್ಥೆಯುಳ್ಳ ಫ್ಯಾನ್‌ಗಳನ್ನು ಪರಿಚಯಿಸಲಾಗಿದೆ.

ಏನಿದು ವಿಶೇಷ ಫ್ಯಾನ್‌?

ವಿಶ್ವವಿದ್ಯಾಲಯದ ಮಾಹಿತಿ ಪ್ರಕಾರ, ಈ ಫ್ಯಾನ್‌ಗಳಲ್ಲಿ ಸ್ಪ್ರಿಂಗ್‌ ಆಧಾರಿತ ವ್ಯವಸ್ಥೆ ಅಳವಡಿಸಲಾಗಿದೆ. ನಿಗದಿತ ಮಿತಿಗಿಂತ ಹೆಚ್ಚಿನ ಭಾರ ಬಿದ್ದಾಗ ವ್ಯವಸ್ಥೆ ಸಕ್ರಿಯಗೊಂಡು ಫ್ಯಾನ್‌ ಕೆಳಕ್ಕೆ ಇಳಿಯುವಂತೆ ವಿನ್ಯಾಸಗೊಳಿಸಲಾಗಿದೆ. ಇದೇ ವೇಳೆ ವಿದ್ಯುತ್ ಸಂಪರ್ಕವೂ ಕಡಿತಗೊಳ್ಳುತ್ತದೆ. ವಿಶ್ವವಿದ್ಯಾಲಯದ ಕುಲಪತಿ ಡಾ. ಕಿಶೋರ್‌ಸಿಂಗ್‌ ಚಾವ್ಡಾ ಅವರು ಹಾಸ್ಟೆಲ್‌ ಕೊಠಡಿಯಲ್ಲಿ ಈ ವ್ಯವಸ್ಥೆಯ ಕಾರ್ಯವಿಧಾನವನ್ನು ಪ್ರದರ್ಶಿಸಿದ್ದಾರೆ ಎಂದು ವರದಿಯಾಗಿದೆ.

ಪ್ರತಿ ಫ್ಯಾನ್‌ಗೆ ಸುಮಾರು 1,500 ರೂ. ವೆಚ್ಚವಾಗಿದ್ದು, 354 ಫ್ಯಾನ್‌ಗಳ ಅಳವಡಿಕೆಗೆ ಅಂದಾಜು 5.31 ಲಕ್ಷ ರೂ. ಖರ್ಚಾಗಿದೆ ಎಂದು ವರದಿಗಳು ತಿಳಿಸಿವೆ. ವಿದ್ಯಾರ್ಥಿಗಳ ವಸತಿ ಕೊಠಡಿಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ

ವಿಶ್ವವಿದ್ಯಾಲಯದ ಕ್ರಮಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಇದು ಸಮಸ್ಯೆಯ ಮೂಲವನ್ನು ಪರಿಹರಿಸುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ವಿದ್ಯಾರ್ಥಿಗಳ ಮಾನಸಿಕ ಒತ್ತಡ, ಪರೀಕ್ಷೆಗಳ ಆತಂಕ, ಭವಿಷ್ಯದ ಅನಿಶ್ಚಿತತೆ ಮತ್ತು ವೃತ್ತಿಜೀವನದ ಚಿಂತೆಗಳಿಗೆ ಪರಿಹಾರ ಕಂಡುಕೊಳ್ಳುವುದು ಹೆಚ್ಚು ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

Must Read