ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿರುವ ‘ಸ್ಟಿಂಗ್’ ಆಪರೇಷನ್ ವಿವಾದದ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಕೊನೆಗೂ ಮೌನ ಮುರಿದಿದ್ದಾರೆ. ಈ ಸ್ಟಿಂಗ್ ಆಪರೇಷನ್ ತಮಗೆ ಬ್ಲ್ಯಾಕ್‌ಮೇಲ್ ಮಾಡುವ ಕುತಂತ್ರವಾಗಿದ್ದು, ಇದರ ಹಿಂದೆ ಒಬ್ಬ ಪತ್ರಕರ್ತ ಹಾಗೂ ಓರ್ವ ಮಹಿಳೆ ಇದ್ದಾರೆ ಎಂದು ಸಿದ್ದರಾಮಯ್ಯ ನೇರವಾಗಿ ಆರೋಪಿಸಿದ್ದಾರೆ.
ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಸಂಚಿನ ಹಿಂದಿರುವ ಸತ್ಯ ಸಾರ್ವಜನಿಕರಿಗೆ ತಿಳಿಯಬೇಕಿದೆ ಎಂದು ಸ್ಪಷ್ಟಪಡಿಸಿದರು.
ಬ್ಲ್ಯಾಕ್‌ಮೇಲ್ ತಂತ್ರ ಸಫಲವಾಗಲ್ಲ
ಈ ಸ್ಟಿಂಗ್ ಆಪರೇಷನ್ ತಂತ್ರದ ಕುರಿತು ತಮಗೆ ಸೆಪ್ಟೆಂಬರ್ ತಿಂಗಳಿನಲ್ಲೇ ಮಾಹಿತಿ ಇತ್ತು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಸುಳ್ಳು ಆರೋಪದ ಹಿಂದಿನ ಸತ್ಯಾಸತ್ಯತೆ ಹೊರಬರಲಿ ಎಂಬ ಉದ್ದೇಶದಿಂದ ತಾವೇ ಖುದ್ದಾಗಿ ದೂರು ನೀಡಿರುವುದಾಗಿ ಹಾಗೂ ಅಪಪ್ರಚಾರ ತಡೆಯಲು ಕೋರ್ಟ್‌ನಿಂದ ತಡೆಯಾಜ್ಞೆ ತಂದಿರುವುದಾಗಿ ತಿಳಿಸಿದ್ದಾರೆ.
ಮುಂದುವರೆದು ಮಾತನಾಡುದ ಅವರು “ನಾನು ಯಾವುದೇ ತಪ್ಪು ಮಾಡಿಲ್ಲ. ಹಾಗಾಗಿ ನನ್ನ ಪರ ಯಾರೂ ನಿಲ್ಲುವ ಅಗತ್ಯವಿಲ್ಲ, ಯಾರ ನೈತಿಕ ಬೆಂಬಲವೂ ನನಗೆ ಬೇಡ” ಎಂದು ಖಡಕ್ ಆಗಿ ಹೇಳಿದ್ದಾರೆ.
ಸ್ವಪಕ್ಷೀಯರ ಕೈವಾಡ ಎಂದ ಯತೀಂದ್ರ
ಸಿದ್ದರಾಮಯ್ಯ ಅವರ ಪುತ್ರ ಹಾಗೂ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು, ಈ ಬ್ಲ್ಯಾಕ್‌ಮೇಲ್ ತಂತ್ರದ ಹಿಂದೆ ಸ್ವಂತ ಕಾಂಗ್ರೆಸ್ ಪಕ್ಷದ ನಾಯಕರ ಕೈವಾಡವೂ ಇದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ವಿಡಿಯೋದಲ್ಲಿ ಕಾಂಗ್ರೆಸ್ ಮಹಿಳಾ ನಾಯಕಿ ಕೃಪಾ ಆಳ್ವಾ ಅವರು ಇದ್ದಾರೆ ಎಂದು ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ ಬೆನ್ನಲ್ಲೇ, ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.
ಇದನ್ನೂ ಓದಿ:
ಪಕ್ಷದ ಶಿಸ್ತು ಕ್ರಮ
ಈ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಇದು ಸೇಡಿನ ರಾಜಕೀಯದ ಹೀನ ಕೃತ್ಯವಾಗಿದೆ ಎಂದು ಖಂಡಿಸಿದ್ದಾರೆ. ಈ ಸ್ಟಿಂಗ್ ಆಪರೇಷನ್‌ನಲ್ಲಿ ಕಾಂಗ್ರೆಸ್ ಪಕ್ಷದವರು ಯಾರಾದರೂ ಭಾಗಿಯಾಗಿದ್ದರೆ ಅವರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.



