October 23, 2026
Friday, October 23, 2026
spot_img

‘ಕ್ರಿಕೆಟ್ ಮೈದಾನ ನನಗೆ ಎರಡನೇ ಮನೆಯಂತಿತ್ತು’: ನಿವೃತ್ತಿ ಘೋಷಿಸಿದ ಟೀಮ್ ಇಂಡಿಯಾ ಆಟಗಾರ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದ ಮಹಿಳಾ ಕ್ರಿಕೆಟ್ ತಂಡದ ಪ್ರತಿಭಾವಂತ ಆಟಗಾರ್ತಿ ಎಸ್. ಮೇಘನಾ ಅವರು ತಮ್ಮ 30ನೇ ವಯಸ್ಸಿನಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೇಶವನ್ನು ಪ್ರತಿನಿಧಿಸಿ ಹಾಗೂ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ (WPL) ಮಿಂಚಿದ್ದ ಮೇಘನಾ, ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಆಟದ ಬದುಕಿಗೆ ವಿದಾಯ ಹೇಳಿದ್ದಾರೆ.

ಭಾವುಕ ಸಂದೇಶದೊಂದಿಗೆ ವಿದಾಯ

ನಿವೃತ್ತಿ ಬಗ್ಗೆ ಬರೆದುಕೊಂಡಿರುವ ಮೇಘನಾ, “ಆಟಗಾರ್ತಿಯಾಗಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿರುವ ಈ ಕ್ಷಣದಲ್ಲಿ ನನ್ನ ಹೃದಯ ತುಂಬಿ ಬಂದಿದೆ. ಕ್ರಿಕೆಟ್ ಮೈದಾನವೇ ನನಗೆ ಎರಡನೇ ಮನೆಯಾಗಿತ್ತು. ಅದು ನನಗೆ ಕಷ್ಟಗಳನ್ನು ಎದುರಿಸುವ ಶಕ್ತಿ, ವಿನಯವನ್ನು ಕಲಿಸಿಕೊಟ್ಟಿದೆ. ಜೊತೆಗೆ ಜೀವನಪೂರ್ತಿ ನೆನಪಿನಲ್ಲಿ ಉಳಿಯುವ ಗೆಳೆಯರನ್ನು ನೀಡಿದೆ,” ಎಂದು ಭಾವುಕರಾಗಿದ್ದಾರೆ. ಆಟ ಮುಗಿದರೂ ಮುಂದಿನ ಪೀಳಿಗೆಯ ಆಟಗಾರರಿಗೆ ಮಾರ್ಗದರ್ಶನ ನೀಡುವ ಮೂಲಕ ಕ್ರಿಕೆಟ್ ಜೊತೆಗಿನ ನಂಟನ್ನು ಮುಂದುವರಿಸುವುದಾಗಿ ಅವರು ತಿಳಿಸಿದ್ದಾರೆ.

ಕ್ರಿಕೆಟ್ ಜೀವನದ ಹಾದಿ ಮತ್ತು ಸಾಧನೆ

ಆಂಧ್ರಪ್ರದೇಶ ಮೂಲದ ಮೇಘನಾ, 2016ರ ನವೆಂಬರ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಿದ್ದರು. ಭಾರತದ ಪರ ಒಟ್ಟು 17 ಟಿ20 ಪಂದ್ಯಗಳನ್ನಾಡಿರುವ ಅವರು 1 ಅರ್ಧಶತಕ ಸೇರಿದಂತೆ 258 ರನ್ ಗಳಿಸಿದ್ದಾರೆ.

2022ರ ಫೆಬ್ರವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಮೇಘನಾ, ಆ ಸರಣಿಯಲ್ಲಿ 49 ಮತ್ತು 61 ರನ್‌ಗಳ ಭರ್ಜರಿ ಇನ್ನಿಂಗ್ಸ್ ಆಡಿದ್ದರು. ವಿಶೇಷವೆಂದರೆ, ಆ ಸರಣಿಯಲ್ಲಿ ಆಡಿದ 3 ಪಂದ್ಯಗಳೇ ಅವರ ಏಕದಿನ ವೃತ್ತಿಜೀವನದ ಏಕೈಕ ಪಂದ್ಯಗಳಾದವು.

ಇದನ್ನೂ ಓದಿ:

 ಆರ್‌ಸಿಬಿ ಚಾಂಪಿಯನ್ ತಂಡದ ಭಾಗವಾಗಿದ್ದ ತಾರೆ

ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮೇಘನಾ ಒಟ್ಟು ಮೂರು ಸೀಸನ್‌ಗಳಲ್ಲಿ ಆಡಿದ್ದಾರೆ. ಮೊದಲ ಸೀಸನ್‌ನಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಪ್ರತಿನಿಧಿಸಿದ್ದ ಇವರು, ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಸೇರಿಕೊಂಡು ಎರಡು ಸೀಸನ್ ಆಡಿದರು. 2024ರಲ್ಲಿ ಆರ್‌ಸಿಬಿ ತಂಡವು ಚೊಚ್ಚಲ ಬಾರಿಗೆ ಡಬ್ಲ್ಯುಪಿಎಲ್ ಟ್ರೋಫಿ ಗೆದ್ದು ಇತಿಹಾಸ ಬರೆದಾಗ ಮೇಘನಾ ಆ ಚಾಂಪಿಯನ್ ತಂಡದ ಪ್ರಮುಖ ಭಾಗವಾಗಿದ್ದರು ಎನ್ನುವುದು ವಿಶೇಷ.

Must Read