ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಖಿಲ ಭಾರತ ವಿದ್ಯಾರ್ಥಿ ಸಂಘದ (AISA) ಅಧ್ಯಕ್ಷೆ ನೆಹಾ ಬೋರಾ ಅವರಿಗೆ ದೆಹಲಿ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ.
ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (SEM) ನೀಡಿದ್ದ 10 ಸಾವಿರ ವೈಯಕ್ತಿಕ ಬಾಂಡ್ ಸಲ್ಲಿಸುವ ನೋಟಿಸ್ ಪ್ರಶ್ನಿಸಿ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಶುಕ್ರವಾರ ವಜಾಗೊಳಿಸಿದೆ. ನ್ಯಾಯಮೂರ್ತಿ ಸುಬ್ರಮೋಣಿಯಂ ಪ್ರಸಾದ್ ಅವರು, “ಈ ಹಂತದಲ್ಲಿ ರಿಟ್ ಅರ್ಜಿಯನ್ನು ತಿರಸ್ಕರಿಸುತ್ತಿದ್ದೇನೆ” ಎಂದು ಆದೇಶಿಸಿದ್ದಾರೆ. ಆದರೆ, ತೀರ್ಪಿನ ಸಂಪೂರ್ಣ ಪ್ರತಿ ಇನ್ನೂ ಲಭ್ಯವಾಗಿಲ್ಲ.
ನೋಟಿಸ್ ಪ್ರಶ್ನಿಸಿದ್ದೇಕೆ?
ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ದೆಹಲಿಯಲ್ಲಿ ಪ್ರತಿಭಟನೆಗಳು ನಡೆದಿದ್ದವು. ಈ ಸಂದರ್ಭದಲ್ಲಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಶಾಂತಿ ಬಾಂಡ್‌ಗೆ ಸಂಬಂಧಿಸಿದ ನೋಟಿಸ್ ಜಾರಿಗೊಳಿಸಿದ್ದರು. ಆದರೆ, ಈ ಕ್ರಮವನ್ನು ಪ್ರಶ್ನಿಸಿ ನೇಹಾ ಬೋರಾ ನ್ಯಾಯಾಲಯದ ಮೊರೆ ಹೋಗಿದ್ದರು.
ಇದನ್ನೂ ಓದಿ:
ಈ ನೋಟಿಸ್‌ನಲ್ಲಿ ಶಾಂತಿ ಭಂಗವಾಗುವ ಸಾಧ್ಯತೆಯನ್ನು ಸಮರ್ಥಿಸುವ ಅಗತ್ಯ ಮಾಹಿತಿ ನೀಡಿಲ್ಲ. ಅಲ್ಲದೆ, ಅದರಲ್ಲಿನ ಆರೋಪಗಳು ಸ್ಪಷ್ಟವಾಗಿಲ್ಲ ಎಂದು ಬೋರಾ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದರು. ಆದರೆ, ದೆಹಲಿ ಪೊಲೀಸರು ಅವರ ಅರ್ಜಿಯ ವಿಚಾರಣೆಯೇ ಕಾನೂನುಬದ್ಧವಾಗಿ ಸ್ವೀಕಾರಾರ್ಹವಲ್ಲ ಎಂದು ಆಕ್ಷೇಪಿಸಿದ್ದರು.
ಪ್ರತಿಭಟನೆಯ ಹಿನ್ನೆಲೆ
ಅಕ್ಟೋಬರ್ 16ರಂದು ಮಂಡಿ ಹೌಸ್‌ನಲ್ಲಿ ಘೋಷಣೆ ಕೂಗಿದ ಆರೋಪ, ಜಂತರ್ ಮಂತರ್ ಸುತ್ತ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಪ್ರತಿಭಟನೆ ನಡೆಸಿದ ಪ್ರಕರಣ ಹಾಗೂ ಜನರನ್ನು ಪ್ರತಿಭಟನೆಗೆ ಪ್ರೇರೇಪಿಸಿದ ಆರೋಪಗಳ ಹಿನ್ನೆಲೆಯಲ್ಲಿ ಕ್ರಮ ಆರಂಭಿಸಲಾಗಿತ್ತು ಎಂದು ವರದಿಯಾಗಿದೆ. ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಮುನ್ನೆಚ್ಚರಿಕಾ ಕ್ರಮದ ಭಾಗವಾಗಿ ಬೋರಾ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಮರುದಿನ ಅವರನ್ನು ಬಿಡುಗಡೆ ಮಾಡಿ ಮ್ಯಾಜಿಸ್ಟ್ರೇಟ್ ನೋಟಿಸ್ ನೀಡಲಾಗಿತ್ತು.



