October 24, 2026
Saturday, October 24, 2026
spot_img

ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ: ಮೂವರ ಸಾ*ವು, 19 ಜನರ ಸ್ಥತಿ ಗಂಭಿರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜಸ್ಥಾನದ ಬಗ್ರು ಬಳಿಯ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಇಂದು ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಪ್ರವಾಸಿಗರು ಪ್ರಯಾಣಿಸುತ್ತಿದ್ದ ಮಿನಿಬಸ್ ಮತ್ತು ಟ್ರೈಲರ್ ನಡುವೆ ನಡೆದ ಈ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದು, 19 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.

ನಿದ್ದೆಯಲ್ಲಿದ್ದಾಗ ನಡೆದುಹೋಯ್ತು ಘೋರ ದುರಂತ

ಮೂಲಗಳ ಪ್ರಕಾರ, ಈ ಮಿನಿಬಸ್ ಖಾತು ಶ್ಯಾಮ್ ಜಿ ದೇವಸ್ಥಾನದಿಂದ ಸಾಲಾಸರ್ ಕಡೆಗೆ ಪ್ರಯಾಣಿಸುತ್ತಿತ್ತು. ಬಸ್‌ನಲ್ಲಿದ್ದ ಪ್ರಯಾಣಿಕರೆಲ್ಲರೂ ಮಹಾರಾಷ್ಟ್ರದ ನಾಶಿಕ್ ಮೂಲದವರಾಗಿದ್ದಾರೆ. ಜೈಪುರದಿಂದ ಸುಮಾರು 20-30 ಕಿಲೋಮೀಟರ್ ದೂರ ಸಾಗುತ್ತಿದ್ದಾಗ, ಮುಂಜಾನೆ 2 ಗಂಟೆಯ ಸುಮಾರಿಗೆ ಮತ್ತೊಂದು ವಾಹನವನ್ನು ಓವರ್‌ಟೇಕ್ ಮಾಡಲು ಹೋಗಿ ಈ ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ವಾಹನಗಳು ಸಂಪೂರ್ಣ ಜಖಂಗೊಂಡಿದೆ.

ಪ್ರಯಾಣಿಕರನ್ನು ಬಿಟ್ಟು ಚಾಲಕ ಪರಾರಿ

ಅಪಘಾತದ ಭೀಕರತೆಯನ್ನು ಕಂಡು ಗಾಬರಿಗೊಂಡ ಮಿನಿಬಸ್ ಚಾಲಕ, ಪ್ರಯಾಣಿಕರ ಪ್ರಾಣವನ್ನು ಲೆಕ್ಕಿಸದೆ ವಾಹನದಿಂದ ಕೆಳಕ್ಕೆ ಜಿಗಿದು ಸ್ಥಳದಿಂದ ಪರಾರಿಯಾಗಿದ್ದಾನೆ. ಗಾಯಗೊಂಡ ಪ್ರಯಾಣಿಕರೊಬ್ಬರು ಕಣ್ಣೀರು ಹಾಕುತ್ತಾ, “ಅಪಘಾತ ನಡೆದಾಗ ನಾವೆಲ್ಲರೂ ಗಾಢ ನಿದ್ರೆಯಲ್ಲಿದ್ದೆವು. ಬಸ್‌ನಲ್ಲಿ 9 ರಿಂದ 10 ತಿಂಗಳ ಪುಟ್ಟ ಮಕ್ಕಳು ಸೇರಿ ಒಟ್ಟು 30 ಜನರಿದ್ದೆವು. ಅಪಘಾತವಾಗುತ್ತಿದ್ದಂತೆ ಚಾಲಕ ನಮ್ಮನ್ನು ಬಿಟ್ಟು ಓಡಿಹೋಗಿದ್ದಾನೆ” ಎಂದು ತಮಗಾದ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ:

ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯ

ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ತನಿಖಾಧಿಕಾರಿ ಲಾಲಾರಾಮ್ ಮತ್ತು ಪೊಲೀಸ್ ಸಿಬ್ಬಂದಿ ತಕ್ಷಣವೇ ಗಸ್ತು ಪಡೆಯೊಂದಿಗೆ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಕೈಗೊಂಡರು. ಅಪಘಾತದಲ್ಲಿ ಗಾಯಗೊಂಡ 19 ಜನರಲ್ಲಿ 7 ಜನರ ಪರಿಸ್ಥಿತಿ ಗಂಭೀರವಾಗಿದ್ದರಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜೈಪುರದ ಎಸ್‌ಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಗಾಯಾಳುಗಳನ್ನು ಹತ್ತಿರದ ಉಪವಿಭಾಗೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Must Read

Skip to toolbar