October 25, 2026
Sunday, October 25, 2026
spot_img

ಬೇಸಿಗೆ ಬಿಸಿಗೆ ಪರ್ಫ್ಯೂಮ್ ಮಾಯ? ಸುವಾಸನೆ ದಿನವಿಡೀ ಉಳಿಯಲು ಇಲ್ಲಿದೆ ಸಿಂಪಲ್ ಟ್ರಿಕ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೇಸಿಗೆ ಕಾಲ ಬಂತೆಂದರೆ ಸಾಕು, ಬಿಸಿಲಿನ ಬೇಗೆಯ ಜೊತೆಗೆ ಬೆವರಿನ ಕಿರಿಕಿರಿಯೂ ಶುರವಾಗುತ್ತದೆ. ಈ ಸಮಯದಲ್ಲಿ ಘಮಘಮಿಸುವ ಪರ್ಫ್ಯೂಮ್ ಹಾಕಿಕೊಂಡು ಹೊರಟರೂ, ಕೆಲವೇ ಗಂಟೆಗಳಲ್ಲಿ ಅದರ ಸುವಾಸನೆ ಮಾಯಾ ಆಗಿಬಿಡುತ್ತದೆ. ಚಳಿಗಾಲ ಅಥವಾ ಮಳೆಗಾಲದಲ್ಲಿ ದಿನವಿಡೀ ಬರುವ ಪರಿಮಳ, ಬೇಸಿಗೆಯಲ್ಲಿ ಮಾತ್ರ ಏಕೆ ಹೀಗೆ ಬೇಗನೆ ಮಾಸಿಹೋಗುತ್ತದೆ?

ಪರ್ಫ್ಯೂಮ್ ಬೇಗನೆ ಮಾಸಲು ಕಾರಣವೇನು?

ಬೇಸಿಗೆಯ ಬಿಸಿಲಿಗೆ ನಮ್ಮ ದೇಹದ ತಾಪಮಾನವೂ ಹೆಚ್ಚಿರುತ್ತದೆ. ಪರ್ಫ್ಯೂಮ್‌ನಲ್ಲಿರುವ ಆಲ್ಕೋಹಾಲ್ ಮತ್ತು ಸುವಾಸನೆಯ ಎಣ್ಣೆಗಳು ಹೆಚ್ಚಿನ ಶಾಖಕ್ಕೆ ಸಿಲುಕಿ ಬೇಗನೆ ಆವಿಯಾಗಿ ಗಾಳಿಯಲ್ಲಿ ವಿಲೀನಗೊಳ್ಳುತ್ತವೆ.

ಬಿಸಿಲಿನಲ್ಲಿ ನಮ್ಮ ಚರ್ಮವು ತನ್ನ ತೇವಾಂಶವನ್ನು ಕಳೆದುಕೊಂಡು ಒಣಗುತ್ತದೆ. ಒಣ ಚರ್ಮವು ಪರ್ಫ್ಯೂಮ್ ಅನ್ನು ಹೀರಿಕೊಳ್ಳುವುದಿಲ್ಲ, ಬದಲಾಗಿ ಬೇಗನೆ ಗಾಳಿಯಲ್ಲಿ ವಿಲೀನವಾಗುವಂತೆ ಮಾಡುತ್ತದೆ.

ಬೇಸಿಗೆಯಲ್ಲಿ ಬರುವ ಬೆವರು ಪರ್ಫ್ಯೂಮ್‌ನ ರಾಸಾಯನಿಕ ಸಂಯೋಜನೆಯನ್ನು ಮುರಿದು, ಅದರ ನೈಜ ಸುವಾಸನೆಯನ್ನು ನಾಶಪಡಿಸುತ್ತದೆ.

ಈ ಮ್ಯಾಜಿಕ್ ಟಿಪ್ಸ್ ಟ್ರೈ ಮಾಡಿ

ಪರ್ಫ್ಯೂಮ್ ಹಚ್ಚುವ ಮೊದಲು ಯಾವುದೇ ವಾಸನೆಯಿಲ್ಲದ ಮಾಯಿಶ್ಚರೈಸರ್ ಅಥವಾ ವ್ಯಾಸಲೀನ್ ಹಚ್ಚಿ. ತೇವಾಂಶವಿರುವ ಚರ್ಮವು ಸುವಾಸನೆಯನ್ನು ದೀರ್ಘಕಾಲದವರೆಗೆ ಹಿಡಿದಿಟ್ಟುಕೊಳ್ಳುತ್ತದೆ.

ಕುತ್ತಿಗೆ, ಮಣಿಕಟ್ಟು, ಮೊಣಕೈ ಒಳಭಾಗ ಮತ್ತು ಕಿವಿಯ ಹಿಂಭಾಗದಂತಹ ನಾಡಿ ಮಿಡಿತ ಇರುವ ಜಾಗಗಳಲ್ಲಿ ಪರ್ಫ್ಯೂಮ್ ಸ್ಪ್ರೇ ಮಾಡಿ. ಈ ಜಾಗಗಳಲ್ಲಿ ಬಿಸಿ ಇರುವುದರಿಂದ ಸುವಾಸನೆ ನಿಧಾನವಾಗಿ ಹರಡುತ್ತದೆ.

ಮಣಿಕಟ್ಟಿಗೆ ಪರ್ಫ್ಯೂಮ್ ಹಚ್ಚಿದ ತಕ್ಷಣ ಎರಡೂ ಕೈಗಳನ್ನು ಉಜ್ಜುವ ಅಭ್ಯಾಸ ಅನೇಕರಿಗಿರುತ್ತದೆ. ಹೀಗೆ ಮಾಡುವುದರಿಂದ ಪರ್ಫ್ಯೂಮ್‌ನ ಅಣುಗಳು ಒಡೆದುಹೋಗಿ, ಸುವಾಸನೆ ಬೇಗನೆ ಮಾಸುತ್ತದೆ.

ಬೇಸಿಗೆಯಲ್ಲಿ ಹೆಚ್ಚು ಸಾಂದ್ರತೆ ಹೊಂದಿರುವ ಪರ್ಫ್ಯೂಮ್ ಅಥವಾ ಪರ್ಫ್ಯೂಮ್ ಆಯಿಲ್ ಬಳಸಿದರೆ ಸುವಾಸನೆ ದಿನವಿಡೀ ಇರುತ್ತದೆ.

ಚರ್ಮಕ್ಕಿಂತ ಹೆಚ್ಚಾಗಿ ಬಟ್ಟೆಯ ಮೇಲೆ ಪರ್ಫ್ಯೂಮ್ ಸ್ಪ್ರೇ ಮಾಡಿ ಸುವಾಸನೆ ಹೆಚ್ಚು ಸಮಯ ಉಳಿಯುತ್ತದೆ.

ಈ ಸರಳ ಅಭ್ಯಾಸಗಳನ್ನು ಅಳವಡಿಸಿಕೊಂಡರೆ, ಬೇಸಿಗೆಯ ಬಿಸಿಲಲ್ಲೂ ನೀವು ದಿನವಿಡೀ ತಾಜಾತನದಿಂದ ಘಮಘಮಿಸಬಹುದು.

Must Read