ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ದೇಹದ ಉಷ್ಣಾಂಶ ಸರಿಯಾಗಿದ್ದರೂ ಕೆಲವು ಬಾರಿ ಪಾದಗಳು ಮಾತ್ರ ಐಸ್‌ನಂತೆ ತಣ್ಣಗಾಗುವ ಅನುಭವ ನಮಗೆಲ್ಲರಿಗೂ ಆಗಿರುತ್ತದೆ. “ನನಗೆ ಚಳಿಯಾಗುತ್ತಿಲ್ಲ, ಆದರೂ ಪಾದಗಳೇಕೆ ಇಷ್ಟೊಂದು ತಂಪಾಗಿವೆ?” ಎಂಬ ಪ್ರಶ್ನೆ ಹಲವರನ್ನು ಕಾಡುವುದು ಸಹಜ. ಈ ರಹಸ್ಯದ ಹಿಂದೆ ನಮ್ಮ ಶರೀರದ ಅದ್ಭುತ ವಿಜ್ಞಾನ ಅಡಗಿದೆ.
ನಮ್ಮ ಸ್ರಷ್ಟಿಯಲ್ಲಿ ಮಾನವ ದೇಹ ಅತ್ಯಂತ ಬುದ್ಧಿವಂತ ವ್ಯವಸ್ಥೆಯನ್ನು ಹೊಂದಿದೆ. ದೇಹವು ತನ್ನ ಪ್ರಮುಖ ಅಂಗಗಳಾದ ಹೃದಯ, ಮೆದುಳು, ಶ್ವಾಸಕೋಶ ಮತ್ತು ಮೂತ್ರಪಿಂಡಗಳ ಉಷ್ಣಾಂಶವನ್ನು ಸದಾ ಕಾಯ್ದುಕೊಳ್ಳಲು ಮೊದಲ ಆದ್ಯತೆ ನೀಡುತ್ತದೆ. ಆದ್ದರಿಂದ, ರಕ್ತ ಸಂಚಲನೆಯನ್ನು ದೇಹದ ಮಧ್ಯಭಾಗಕ್ಕೆ ಹೆಚ್ಚಾಗಿ ಹರಿಸಿ, ತುದಿಯಲ್ಲಿರುವ ಕೈ-ಕಾಲುಗಳ ಭಾಗಕ್ಕೆ ಹರಿಯುವ ರಕ್ತದ ಪ್ರಮಾಣವನ್ನು ಕೊಂಚ ಕಡಿಮೆ ಮಾಡುತ್ತದೆ. ಇದರಿಂದಾಗಿ ಪಾದಗಳು ತಣ್ಣಗಾಗುತ್ತವೆ.
ನಮ್ಮ ಪಾದಗಳು ದೇಹದ ಅತ್ಯಂತ ಕೆಳಭಾಗದಲ್ಲಿರುವುದರಿಂದ ಮತ್ತು ಹೃದಯದಿಂದ ದೂರವಿರುವುದರಿಂದ, ಅಲ್ಲಿಗೆ ರಕ್ತ ತಲುಪಲು ಹೆಚ್ಚು ಶ್ರಮ ಬೇಕಾಗುತ್ತದೆ. ರಕ್ತನಾಳಗಳು ಕಿರಿದಾದಾಗ ಪಾದಗಳಿಗೆ ತಲುಪುವ ಬೆಚ್ಚಗಿನ ರಕ್ತದ ಪ್ರಮಾಣ ಕಡಿಮೆಯಾಗುತ್ತದೆ. ಇದು ಯಾವುದೇ ದೊಡ್ಡ ಕಾಯಿಲೆಯಲ್ಲ, ಬದಲಿಗೆ ನಮ್ಮ ನರಮಂಡಲದ ಸಹಜ ಪ್ರತಿಕ್ರಿಯೆಯಾಗಿದೆ.
ನಿಮಗೆ ತಿಳಿದಿರಲಿ, ಮಾನಸಿಕ ಒತ್ತಡ ಅಥವಾ ಆತಂಕ ಉಂಟಾದಾಗ ದೇಹದಲ್ಲಿ ‘ಅಡ್ರಿನಲಿನ್’ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದು ದೇಹದ ರಕ್ತನಾಳಗಳನ್ನು ಕಿರಿದಾಗಿಸಿ, ರಕ್ತವನ್ನು ಮುಖ್ಯ ಅಂಗಗಳತ್ತ ತಳ್ಳುತ್ತದೆ. ಪರಿಣಾಮವಾಗಿ, ನೀವು ಚಳಿಯಿಲ್ಲದಿದ್ದರೂ ನಿಮ್ಮ ಪಾದಗಳು ತಕ್ಷಣವೇ ತಣ್ಣಗಾಗುತ್ತವೆ.
ದೇಹದಲ್ಲಿ ಕಬ್ಬಿಣದ ಅಂಶ ಕಡಿಮೆಯಾದಾಗ ಅಥವಾ ವಿಟಮಿನ್ B-12 ಕೊರತೆ ಉಂಟಾದಾಗ ರಕ್ತದಲ್ಲಿ ಆಮ್ಲಜನಕವನ್ನು ಸಾಗಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಇದು ಕೂಡ ಕಾಲುಗಳು ತಣ್ಣಗಾಗಲು ಪ್ರಮುಖ ಕಾರಣವಾಗಿದೆ.
ಪಾದಗಳು ತಣ್ಣಗಾದಾಗ ಹಗುರವಾದ ನಡಿಗೆ, ಉಗುರುಬೆಚ್ಚಗಿನ ನೀರಿನಲ್ಲಿ ಕಾಲುಗಳನ್ನಿಡುವುದು ಅಥವಾ ಸಾಕ್ಸ್ ಧರಿಸುವುದರಿಂದ ರಕ್ತಸಂಚಾರ ಸುಗಮಗೊಂಡು ಪಾದಗಳು ಮತ್ತೆ ಬೆಚ್ಚಗಾಗುತ್ತವೆ.



