ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಚಿತ್ರರಂಗವೇ ಕಾತರದಿಂದ ಕಾಯುತ್ತಿರುವ ನಮಿತ್ ಮಲ್ಹೋತ್ರಾ ಅವರ ನಿರ್ಮಾಣದ ‘ರಾಮಾಯಣ’ ಸಿನಿಮಾದಿಂದ ಮತ್ತೊಂದು ಅದ್ಭುತ ಸಂಗೀತದ ಕೊಡುಗೆ ಪ್ರೇಕ್ಷಕರ ಮುಂದೆ ಬಂದಿದೆ. ಶ್ರೀರಾಮ ಮತ್ತು ಸೀತಾದೇವಿಯ ದಿವ್ಯ ಬಾಂಧವ್ಯವನ್ನು ಅನಾವರಣಗೊಳಿಸುವ ‘ಮಂಗಲ್ ರಂಗ್’ ಎಂಬ ಗೀತೆ ಈಗ ಯೂಟ್ಯೂಬ್ ಮತ್ತು ಎಲ್ಲಾ ಮ್ಯೂಸಿಕ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಗಿದೆ.
ಈ ಹಾಡಿನಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ ಮತ್ತು ಸಾಯಿ ಪಲ್ಲವಿ ಸೀತಾದೇವಿಯಾಗಿ ಕಾಣಿಸಿಕೊಂಡಿದ್ದಾರೆ. ರಾಜಮನೆತನದ ವೈಭವದ ಅರಮನೆಗಳು, ಪವಿತ್ರ ವಿವಾಹದ ದೃಶ್ಯಗಳು ಹಾಗೂ ಅಯೋಧ್ಯೆಯ ಆಚೆಗಿನ ಅವರ ಸುಂದರ ಜೀವನದ ಪಯಣವನ್ನು ಈ ಹಾಡಿನ ದೃಶ್ಯ ವೈಭವವು ಕಣ್ಣಿಗೆ ಕಟ್ಟುವಂತೆ ಬಿಂಬಿಸುತ್ತದೆ. ಪ್ರೇಕ್ಷಕರ ಮನಸ್ಸಿಗೆ ತಲುಪುವಂತೆ ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಈ ಗೀತೆ ಹೊರಬಂದಿದೆ.
ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಅವರ ಮಧುರ ಸಂಗೀತ ಸಂಯೋಜನೆ ಈ ಹಾಡಿಗಿದೆ. ಹಿಂದಿ ಆವೃತ್ತಿಗೆ ಡಾ. ಕುಮಾರ್ ವಿಶ್ವಾಸ್ ಸಾಹಿತ್ಯ ಒದಗಿಸಿದ್ದು, ಖ್ಯಾತ ಗಾಯಕರಾದ ಅರಿಜಿತ್ ಸಿಂಗ್ ಮತ್ತು ಶ್ರೇಯಾ ಘೋಷಾಲ್ ಧ್ವನಿಯಾಗಿದ್ದಾರೆ. ಪ್ರತಿ ಭಾಷೆಯಲ್ಲೂ ಪ್ರಾದೇಶಿಕ ಭಾವನೆಗೆ ತಕ್ಕಂತೆ ಶ್ರೇಷ್ಠ ಗಾಯಕರು ಹಾಗೂ ಸಾಹಿತಿಗಳು ಈ ಗೀತೆಯನ್ನು ಸಜ್ಜುಗೊಳಿಸಿದ್ದಾರೆ.
ಈ ಚಿತ್ರದ ಮೊದಲ ಭಾಗವು 2026ರ ನವೆಂಬರ್ 5 ರಂದು ಜಾಗತಿಕವಾಗಿ ಐಮ್ಯಾಕ್ಸ್ ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಲಿದೆ. ಎರಡನೇ ಭಾಗವು 2028ರ ದೀಪಾವಳಿಗೆ ತೆರೆಕಾಣಲಿದೆ. ಸೋನಿ ಪಿಕ್ಚರ್ಸ್ ಸಂಸ್ಥೆಯು ಭಾರತವನ್ನು ಹೊರತುಪಡಿಸಿ ಜಾಗತಿಕವಾಗಿ ಈ ಸಿನಿಮಾವನ್ನು ವಿತರಿಸಲಿದ್ದು, ಹಿಂದಿ ಮಾರುಕಟ್ಟೆಯಲ್ಲಿ ಧರ್ಮಾ ಪ್ರೊಡಕ್ಷನ್ಸ್ ವಿತರಿಸಲಿದೆ.



