ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಪಾನ್ನ ಐಚಿ-ನಗೋಯಾದಲ್ಲಿ ಮುಕ್ತಾಯಗೊಂಡ 2026ರ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಭಾರತದ ಪ್ಯಾರಾ-ಅಥ್ಲೀಟ್ಗಳು ದಾಖಲೆಯ 114 ಪದಕಗಳನ್ನು ಗೆದ್ದು ಜಗತ್ತಿನಲ್ಲೇ ಹೊಸ ಇತಿಹಾಸ ಬರೆದಿದ್ದಾರೆ.
ಕ್ರೀಡಾಕೂಟದ ಇತಿಹಾಸದಲ್ಲೇ ಇದು ಭಾರತದ ಅತ್ಯುತ್ತಮ ಪ್ರದರ್ಶನವಾಗಿದ್ದು, ಒಟ್ಟು 30 ಚಿನ್ನ, 35 ಬೆಳ್ಳಿ ಮತ್ತು 49 ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದೆ. ಭಾರತೀಯ ಕ್ರೀಡಾಪಟುಗಳ ಈ ಅಪ್ರತಿಮ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಸಂದ “ಅದ್ಭುತ ಹೆಮ್ಮೆಯ ಮತ್ತು ಸಂತಸದ ಕ್ಷಣ” ಎಂದು ಕೊಂಡಾಡಿದ್ದಾರೆ.
ಸಣ್ಣ ಪಡೆಯಿಂದ ಭಾರೀ ದಾಖಲೆ
ಕಳೆದ ಬಾರಿ ಹ್ಯಾಂಗ್ಝೌನಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾರತ 309 ಅಥ್ಲೀಟ್ಗಳನ್ನು ಕಳುಹಿಸಿ 108 ಪದಕಗಳನ್ನು ಗೆದ್ದಿತ್ತು. ಆದರೆ ಈ ಬಾರಿ ಕೇವಲ 168 ಕ್ರೀಡಾಪಟುಗಳ ಸಣ್ಣ ತಂಡದೊಂದಿಗೆ ತೆರಳಿದ್ದ ಭಾರತ, ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿ ತನ್ನ ಹಳೆಯ ದಾಖಲೆಯನ್ನು ಮುರಿದು ಹಾಕಿರುವುದು ವಿಶೇಷ.
ಬ್ಯಾಡ್ಮಿಂಟನ್ ಮತ್ತು ಆರ್ಚರಿಯಲ್ಲಿ ಚಿನ್ನದ ಬೇಟೆ
ಪುರುಷರ ಸಿಂಗಲ್ಸ್ (SL3) ಫೈನಲ್ನಲ್ಲಿ ಒಲಿಂಪಿಕ್ ಚಾಂಪಿಯನ್ ನಿತೇಶ್ ಕುಮಾರ್ ಅವರು ದೇಶದವರೇ ಆದ ವಿಶ್ವ ಚಾಂಪಿಯನ್ ಪ್ರಮೋದ್ ಭಗತ್ ಅವರನ್ನು ಸೋಲಿಸಿ ಚಿನ್ನದ ಪದಕ ಗೆದ್ದರೆ, ಪ್ರಮೋದ್ ಬೆಳ್ಳಿ ಪದಕ ಪಡೆದರು. ಇನ್ನು ಮಹಿಳೆಯರ ಡಬಲ್ಸ್ನಲ್ಲಿ ತುಳಸಿಮತಿ ಮುರುಗೇಸನ್ ಮತ್ತು ಮಾನಸಿ ಜೋಶಿ ಜೋಡಿಯು ಚೀನಾ ತಂಡವನ್ನು ಮಣಿಸಿ ಚಿನ್ನದ ಮುಕುಟ ಧರಿಸಿತು.
ಹರ್ವಿಂದರ್ ಸಿಂಗ್ ಮತ್ತು ಹೊಸ ಆಟಗಾರ ವಿಜಯ್ ಸುಂಡಿ ಪುರುಷರ ರಿಕರ್ವ್ ಡಬಲ್ಸ್ನಲ್ಲಿ ಚಿನ್ನ ಗೆದ್ದರೆ, ಪೂಜಾ ಜತ್ಯನ್ ಮತ್ತು ಭಾವನಾ ಚೌಧರಿ ಮಹಿಳಾ ವಿಭಾಗದಲ್ಲಿ ಬೆಳ್ಳಿ ಗೆದ್ದು ಇತಿಹಾಸ ಬರೆದರು.
ಟ್ರ್ಯಾಕ್ ಆಂಡ್ ಫೀಲ್ಡ್ನಲ್ಲಿ ವಿಶ್ವದಾಖಲೆ
ಹ್ಯಾನೆ ಪುರುಷರ ಜಾವೆಲಿನ್ ಎಸೆತದಲ್ಲಿ 60.49 ಮೀಟರ್ ಎಸೆಯುವ ಮೂಲಕ ಹೊಸ ‘ವಿಶ್ವದಾಖಲೆ’ಯೊಂದಿಗೆ ಚಿನ್ನ ಗೆದ್ದರು. ಮತ್ತೊಂದೆಡೆ, ಭಾರತದ ಸುಮಿತ್ ಚಿನ್ನ, ಮಹೇಂದ್ರ ಗುರ್ಜರ್ ಬೆಳ್ಳಿ ಮತ್ತು ಸಂದೀಪ್ ಸಂಜಯ್ ಕಂಚು ಗೆದ್ದು, ಜಾವೆಲಿನ್ನ ಒಂದೇ ವಿಭಾಗದ ಎಲ್ಲಾ ಮೂರು ಪದಕಗಳನ್ನು ಮುಡಿಗೇರಿಸಿಕೊಂಡು ಕ್ಲೀನ್ ಸ್ವೀಪ್ ಸಾಧನೆ ಮಾಡಿದರು.
ಹೊಸ ಆಟಗಾರ ಸಂದೀಪ್ 400 ಮೀಟರ್ ಓಟವನ್ನು ಕೇವಲ 52.28 ಸೆಕೆಂಡುಗಳಲ್ಲಿ ಮುಗಿಸಿ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಪ್ರಣವ್ ಸೂರ್ಮಾ ಗೇಮ್ಸ್ ದಾಖಲೆಯೊಂದಿಗೆ ಚಿನ್ನ ಗೆದ್ದರೆ, ಧರಂಬೀರ್ ಕಂಚಿನ ಪದಕ ಪಡೆದರು.
ಶೂಟಿಂಗ್, ಟೇಬಲ್ ಟೆನಿಸ್ ಹಾಗೂ ಈಜು
ಮೋನಾ ಅಗರ್ವಾಲ್ ಮಹಿಳೆಯರ 50 ಮೀಟರ್ ರೈಫಲ್ 3 ಪೊಸಿಷನ್ನಲ್ಲಿ ಹೊಸ ವಿಶ್ವದಾಖಲೆ ಮತ್ತು ಏಷ್ಯನ್ ಗೇಮ್ಸ್ ದಾಖಲೆಯೊಂದಿಗೆ ಪದಕ ಗೆದ್ದ ಮೊದಲ ಭಾರತೀಯ ಶೂಟರ್ ಎನಿಸಿಕೊಂಡರು.
ಇದನ್ನೂ ಓದಿ:
50 ವರ್ಷದ ಜೆಹಾನ್ ದೊರಾಬ್ ಮದನ್ ಮತ್ತು ಶುಭಂ ವಾಧ್ವಾ ಜೋಡಿಯು ಕಂಚು ಪದಕ ಗೆದ್ದಿತು. ಮದನ್ ಈ ಬಾರಿಯ ಭಾರತೀಯ ತಂಡದ ಅತ್ಯಂತ ಹಿರಿಯ ವಯಸ್ಸಿನ ಪದಕ ವಿಜೇತರಾಗಿದ್ದಾರೆ. ಹಿಮಾಂಶು ನಂದಲ್ 100 ಮೀಟರ್ ಫ್ರೀಸ್ಟೈಲ್ನಲ್ಲಿ ಕಂಚು ಪದಕ ಗೆಲ್ಲುವ ಮೂಲಕ ಕ್ರೀಡಾಕೂಟದಲ್ಲಿ ವೈಯಕ್ತಿಕವಾಗಿ ಒಟ್ಟು 3 ಕಂಚು ಪದಕಗಳನ್ನು ಭಾರತದ ಮುಡಿಗೆ ಹಾಕಿದರು.
ಎಕ್ಸ್ ಮೂಲಕ ಶುಭ ಹಾರೈಸಿರುವ ಪ್ರಧಾನಿ ಮೋದಿ, “ನಮ್ಮ ಪ್ಯಾರಾ-ಅಥ್ಲೀಟ್ಗಳ ಅಸಾಧಾರಣ ಸಾಧನೆಗೆ ಇಡೀ ದೇಶವೇ ಹೆಮ್ಮೆಪಡುತ್ತಿದೆ. ಪ್ರತಿಯೊಬ್ಬ ಕ್ರೀಡಾಪಟುವಿನ ದೃಢಸಂಕಲ್ಪ ಮತ್ತು ಸಾಧನೆ ಕೋಟ್ಯಂತರ ಭಾರತೀಯರಿಗೆ ಸ್ಫೂರ್ತಿಯಾಗಿದೆ” ಎಂದು ಶ್ಲಾಘಿಸಿದ್ದಾರೆ.



