ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕ ಸಹಕಾರಕ್ಕೆ ಭಾರತ ಸದಾ ಬದ್ಧವಾಗಿದೆ. ಕೊರೋನಾ ಸಂಕಷ್ಟದ ಲಸಿಕೆ ಪೂರೈಕೆ, ಅಭಿವೃದ್ಧಿ ಪಾಲುದಾರಿಕೆ ಹಾಗೂ ತುರ್ತು ಮಾನವೀಯ ನೆರವಿನ ಮೂಲಕ ನಮ್ಮ ದೇಶವು ‘ವಸುಧೈವ ಕುಟುಂಬಕಂ’ ತತ್ವವನ್ನು ಜಗತ್ತಿಗೆ ಕೇವಲ ಬೋಧಿಸದೆ, ಪ್ರಾಯೋಗಿಕವಾಗಿ ಆಚರಣೆಗೆ ತಂದು ತೋರಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಭಾನುವಾರ ಹೆಮ್ಮೆಯಿಂದ ಹೇಳಿದ್ದಾರೆ.
ದೆಹಲಿಯ ಭಾರತ ಮಂಟಪದಲ್ಲಿ ‘ವಿಶ್ವಸಂಸ್ಥೆ ದಿನಾಚರಣೆ’ಯ ಅಂಗವಾಗಿ ಆಯೋಜಿಸಲಾಗಿದ್ದ ‘ಚಿನ್ಮಯ ಅಮೃತ್ ಮಹೋತ್ಸವ ಜಾಗತಿಕ ಸಮ್ಮೇಳನ’ದಲ್ಲಿ ಅವರು ಮಾತನಾಡಿದರು.
ಸಂಕಷ್ಟದ ಕಾಲದಲ್ಲಿ ಜಗತ್ತಿಗೆ ಭಾರತದ ಸಾಥ್
ಕೋವಿಡ್-19 ಸಾಂಕ್ರಾಮಿಕ ರೋಗದ ಕಠಿಣ ದಿನಗಳಲ್ಲಿ ನಮ್ಮ ದೇಶದಲ್ಲೇ ವ್ಯಾಕ್ಸಿನೇಷನ್ ಪ್ರಕ್ರಿಯೆ ಚಾಲ್ತಿಯಲ್ಲಿದ್ದರೂ, ಲಸಿಕೆ ಸಿಗದೆ ಜಗತ್ತಿನ ರೇಸ್ನಲ್ಲಿ ಹಿಂದೆ ಬಿದ್ದಿದ್ದ ಬಡ ರಾಷ್ಟ್ರಗಳಿಗೆ ಲಸಿಕೆಗಳನ್ನು ಪೂರೈಸಲು ಭಾರತ ನಿರ್ಧಾರ ಕೈಗೊಂಡಿದ್ದನ್ನು ಸಚಿವರು ನೆನಪಿಸಿಕೊಂಡರು. ಪ್ರಸ್ತುತ ಭಾರತದ ಅಭಿವೃದ್ಧಿ ಪಾಲುದಾರಿಕೆಯು ಜಗತ್ತಿನ ಸುಮಾರು 78 ರಾಷ್ಟ್ರಗಳಿಗೆ ವ್ಯಾಪಿಸಿದ್ದು, ನೂರಾರು ಜನಪರ ಯೋಜನೆಗಳು ಯಶಸ್ವಿಯಾಗಿ ನಡೆಯುತ್ತಿವೆ. ನಮ್ಮ ದೇಶವು ತನ್ನ ರಾಷ್ಟ್ರೀಯ ಗುರಿಗಳೊಂದಿಗೆ ಜಾಗತಿಕ ಸಾಮರ್ಥ್ಯ ವೃದ್ಧಿಗೂ ಸದಾ ಸಿದ್ಧವಿದೆ ಎಂದರು.
ತುರ್ತು ನೆರವಿನಲ್ಲಿ ಭಾರತವೇ ಮೊದಲು
ಯಾವುದೇ ದೇಶ ಆಪತ್ತಿನಲ್ಲಿದ್ದಾಗ ತಕ್ಷಣವೇ ಸ್ಪಂದಿಸುವ ಭಾರತದ ಗುಣವನ್ನು ಕೊಂಡಾಡಿದ ಅವರು, “ನೇಪಾಳ, ಶ್ರೀಲಂಕಾ, ವೆನೆಜುವೆಲಾ ಅಥವಾ ಜಮೈಕಾ ದೇಶಗಳೇ ಇರಲಿ, ಸಂಕಷ್ಟದ ಸಮಯದಲ್ಲಿ ಭಾರತದ ಸಹಾಯ ಹಸ್ತ ಸದಾ ಚಾಚಿಯೇ ಇರುತ್ತದೆ. ಹೀಗಾಗಿಯೇ ‘ವಸುಧೈವ ಕುಟುಂಬಕಂ’ ಎನ್ನುವುದು ಭಾರತಕ್ಕೆ ಕೇವಲ ಭಾಷಣವಲ್ಲ, ಅದು ನಮ್ಮ ಆಚರಣೆ” ಎಂದು ಅವರು ಸ್ಪಷ್ಟಪಡಿಸಿದರು.
ವಿಶ್ವಸಂಸ್ಥೆಯ ಮೂಕಪ್ರೇಕ್ಷಕ ನೀತಿಗೆ ಕಳವಳ
ಪ್ರಸ್ತುತ ಜಗತ್ತಿನಲ್ಲಿ ನಡೆಯುತ್ತಿರುವ ಎರಡು ಪ್ರಮುಖ ಸಂಘರ್ಷಗಳಾದ ಉಕ್ರೇನ್ ಯುದ್ಧ ಮತ್ತು ಮಧ್ಯಪ್ರಾಚ್ಯದ ಯುದ್ಧಗಳ ಬಗ್ಗೆ ಜೈಶಂಕರ್ ತೀವ್ರ ಕಳವಳ ವ್ಯಕ್ತಪಡಿಸಿದರು. ಈ ಯುದ್ಧಗಳಲ್ಲಿ ಯಾವುದೇ ಪಾತ್ರವಿಲ್ಲದ, ದೂರದ ದೇಶಗಳ ಸಾಮಾನ್ಯ ಜನ ಮತ್ತು ಆರ್ಥಿಕತೆಗಳು ಇದರ ದುಬಾರಿ ಬೆಲೆಯನ್ನು ತೆರುತ್ತಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ:
“ನಾವು ಕೇವಲ ಮೂಕಪ್ರೇಕ್ಷಕರಾಗಿ ಇರಲು ಸಾಧ್ಯವಿಲ್ಲ. ಮಾತುಕತೆ ಮತ್ತು ರಾಜತಾಂತ್ರಿಕತೆಯೇ ಎಲ್ಲ ಸಮಸ್ಯೆಗಳಿಗೂ ಇರುವ ಏಕೈಕ ಪರಿಹಾರ ಎಂಬುದನ್ನು ಭಾರತ ನಂಬುತ್ತದೆ” ಎಂದ ಅವರು, ವಿಶ್ವಸಂಸ್ಥೆಯು ಜಾಗತಿಕ ಬಿಕ್ಕಟ್ಟುಗಳ ಸಂದರ್ಭದಲ್ಲಿ ಮೂಕಪ್ರೇಕ್ಷಕನಾಗದೆ ಬಲಿಷ್ಠ ನಾಯಕತ್ವವನ್ನು ಪ್ರದರ್ಶಿಸಬೇಕು ಹಾಗೂ ಜಾಗತಿಕ ನಿರ್ಧಾರಗಳಿಂದ ಪ್ರಪಂಚದ ಯಾವುದೇ ಭಾಗವನ್ನು ಹೊರಗಿಡಬಾರದು ಎಂದು ಸುಧಾರಣೆಗೆ ಒತ್ತಾಯಿಸಿದರು.



