October 25, 2026
Sunday, October 25, 2026
spot_img

LPG ವಿತರಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ: ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಜ್ಜಾದ ಒಕ್ಕೂಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಎಲ್‌ಪಿಜಿ ಸಿಲಿಂಡರ್ ವಿತರಕರ ಕಮಿಷನ್ ಹಾಗೂ ಇತರೆ ಶುಲ್ಕಗಳ ಸಮಗ್ರ ಪರಿಷ್ಕರಣೆಗೆ ಒತ್ತಾಯಿಸಿ ದೇಶಾದ್ಯಂತವಿರುವ ವಿತರಕರು ಅಕ್ಟೋಬರ್ 26ರ ಸೋಮವಾರದಂದು ನವದೆಹಲಿಯ ಸಿಬಿಡಿ ಮೈದಾನದಲ್ಲಿ ಬೃಹತ್ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ. ತಮ್ಮ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ತಕ್ಷಣವೇ ಈಡೇರಿಸದಿದ್ದರೆ ದೇಶಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಹೂಡುವುದಾಗಿ ಎಲ್‌ಪಿಜಿ ವಿತರಕರ ಒಕ್ಕೂಟ ಎಚ್ಚರಿಕೆ ನೀಡಿದೆ.

ಇಂದು ದೆಹಲಿಯ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಬಿ. ಎಸ್. ಶರ್ಮಾ ಅವರು, ಕಳೆದ ಎಂಟು ವರ್ಷಗಳಿಂದ ಸಿಲಿಂಡರ್ ವಿತರಕರ ಕಮಿಷನ್, ಆಡಳಿತಾತ್ಮಕ ಶುಲ್ಕಗಳು ಹಾಗೂ ಹೋಮ್ ಡೆಲಿವರಿ ಶುಲ್ಕಗಳ ಪರಿಷ್ಕರಣೆ ನನೆಗುದಿಗೆ ಬಿದ್ದಿದೆ. ಗೋಡೌನ್‌ನಿಂದ ಗ್ರಾಹಕರ ಮನೆಗೆ ಸಿಲಿಂಡರ್ ತಲುಪಿಸಲು ನಮಗೆ ಸಿಗುತ್ತಿರುವುದು ಕೇವಲ 35 ರೂಪಾಯಿ ಮಾತ್ರ. ಇದರಿಂದಾಗಿ ದೇಶಾದ್ಯಂತ ಸಾವಿರಾರು ವಿತರಕರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ. 2018ರ ನಂತರ 2022ರಲ್ಲಿ ಕೇವಲ ತಾತ್ಕಾಲಿಕ ಪರಿಹಾರವಾಗಿ ಕಮಿಷನ್ ಅನ್ನು ಅಲ್ಪ ಪ್ರಮಾಣದಲ್ಲಿ ಹೆಚ್ಚಿಸಲಾಗಿತ್ತು, ಆದರೆ ಶಾಶ್ವತ ಪರಿಷ್ಕರಣೆ ಇನ್ನೂ ಆಗಿಲ್ಲ ಎಂದು ಅವರು ದೂರಿದ್ದಾರೆ.

ಪಿಎನ್‌ಜಿ ಪೈಪ್‌ಲೈನ್ ನೀತಿಗೆ ತೀವ್ರ ವಿರೋಧ

ಸರ್ಕಾರವು ಮಾರ್ಚ್ 24, 2026 ರಂದು ಹೊರಡಿಸಿರುವ ಹೊಸ ಆದೇಶದ ವಿರುದ್ಧ ವಿತರಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೈಪ್‌ಲೈನ್ ಮೂಲಕ ನೈಸರ್ಗಿಕ ಅನಿಲ ಸಂಪರ್ಕ ಕಲ್ಪಿಸಲಾಗಿರುವ ಪ್ರದೇಶಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಸರಬರಾಜನ್ನು ಕಡ್ಡಾಯವಾಗಿ ಸ್ಥಗಿತಗೊಳಿಸಬೇಕು ಎಂದು ಸರ್ಕಾರ ಆದೇಶಿಸಿದೆ. ಇದು ವಿತರಕರ ವ್ಯಾಪಾರದ ಮೇಲೆ ಗಂಭೀರ ಹೊಡೆತ ನೀಡುತ್ತಿರುವುದಲ್ಲದೆ, ತಮಗೆ ಬೇಕಾದ ಇಂಧನವನ್ನು ಆಯ್ದುಕೊಳ್ಳುವ ಗ್ರಾಹಕರ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಒಕ್ಕೂಟ ವಾದಿಸಿದೆ. ಇದು ಎಲ್‌ಪಿಜಿ ವಿತರಕರನ್ನು ಮುಳುಗಿಸಿ, ಪಿಎನ್‌ಜಿ ಕಂಪನಿಗಳಿಗೆ ಲಾಭ ಮಾಡಿಕೊಡುವ ತಂತ್ರ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ:

ಸರ್ಕಾರಿ ತೈಲ ಕಂಪನಿಗಳ ವಿರುದ್ಧ ಗಂಭೀರ ಆರೋಪ

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಅಧಿಕಾರಿಗಳು ಗ್ಯಾಸ್ ಸ್ಟವ್, ರಬ್ಬರ್ ಟ್ಯೂಬ್, ಲೈಟರ್ ಹಾಗೂ ಏಪ್ರನ್‌ಗಳನ್ನು ಕಡ್ಡಾಯವಾಗಿ ಮಾರಾಟ ಮಾಡುವಂತೆ ವಿತರಕರ ಮೇಲೆ ಅನಗತ್ಯ ಒತ್ತಡ ಹೇರುತ್ತಿದ್ದಾರೆ ಎಂದು ಒಕ್ಕೂಟದ ಪ್ರಮುಖರು ಆರೋಪಿಸಿದ್ದಾರೆ. ಅಲ್ಲದೆ, ನಿಯಮಬಾಹಿರವಾಗಿ ಕಮರ್ಷಿಯಲ್ ಸಿಲಿಂಡರ್‌ಗಳನ್ನು ಖರೀದಿಸುವಂತೆ ಒತ್ತಾಯಿಸಲಾಗುತ್ತಿದ್ದು, ಇದು ಅಗತ್ಯ ವಸ್ತುಗಳ ಕಾಯ್ದೆ 1955ರ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ಸರ್ಕಾರ ಕೂಡಲೇ ಬಗೆಹರಿಸದಿದ್ದರೆ, ದೇಶಾದ್ಯಂತ ಸಿಲಿಂಡರ್ ವಿತರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಹೋರಾಟ ತೀವ್ರಗೊಳಿಸುವುದಾಗಿ ವಿತರಕರು ಎಚ್ಚರಿಸಿದ್ದಾರೆ.

Must Read