ಹೊಸದಿಗಂತ ವರದಿ ಬೆಳಗಾವಿ:
ಬೆಳಗಾವಿ: ಐತಿಹಾಸಿಕ ಕಿತ್ತೂರು ಉತ್ಸವದ ಅಂಗವಾಗಿ ಆಯೋಜಿಸಲಾದ ಕುಸ್ತಿ ಪಂದ್ಯಾವಳಿ ಕ್ರೀಡಾಭಿಮಾನಿಗಳ ಗಮನ ಸೆಳೆಯಿತು. ಪೈಲ್ವಾನರ ಶಕ್ತಿ, ಸಾಮರ್ಥ್ಯ, ಚಾಕಚಕ್ಯತೆ ಹಾಗೂ ವಿವಿಧ ಕುಸ್ತಿ ಪಟ್ಟುಗಳ ಪ್ರದರ್ಶನದಿಂದ ಅಖಾಡ ರಂಗೇರಿದ್ದು, ಸಾವಿರಾರು ಪ್ರೇಕ್ಷಕರಲ್ಲಿ ಉತ್ಸಾಹ ಮತ್ತು ರೋಮಾಂಚನ ಮೂಡಿಸಿತು.

ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಐತಿಹಾಸಿಕ ನೆಲದಲ್ಲಿ ನಡೆಯುತ್ತಿರುವ 202ನೇ ಕಿತ್ತೂರು ಉತ್ಸವದ ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳ ಭಾಗವಾಗಿ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಸಾಂಪ್ರದಾಯಿಕ ಕುಸ್ತಿ ಕಲೆಯ ವೈಭವವನ್ನು ಅನಾವರಣಗೊಳಿಸಿದ ಪಂದ್ಯಾವಳಿ ಜನರ ಮೆಚ್ಚುಗೆಗೆ ಪಾತ್ರವಾಯಿತು.
ಅಖಾಡದಲ್ಲಿ ಸೆಣಸಾಡಿದ ಪೈಲ್ವಾನರು ಎದುರಾಳಿಗಳ ಪಟ್ಟುಗಳಿಗೆ ಪ್ರತ್ಯುತ್ತರ ನೀಡುತ್ತ ತಮ್ಮ ಕೌಶಲವನ್ನು ಪ್ರದರ್ಶಿಸಿದರು. ಎದುರಾಳಿಯನ್ನು ಮಣಿಸಲು ನಡೆಸಿದ ಜಿದ್ದಾಜಿದ್ದಿನ ಹೋರಾಟ, ಚುರುಕಿನ ಚಲನೆಗಳು ಹಾಗೂ ವಿವಿಧ ಕುಸ್ತಿ ಪಟ್ಟುಗಳು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದವು. ಪ್ರತಿ ಹಂತದಲ್ಲಿಯೂ ಪೈಲ್ವಾನರು ತೋರಿದ ಆತ್ಮವಿಶ್ವಾಸ, ದೈಹಿಕ ಸಾಮರ್ಥ್ಯ ಮತ್ತು ಹೋರಾಟದ ಮನೋಭಾವ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.
ದೇಶ-ವಿದೇಶದ ಪೈಲ್ವಾನರ ಭಾಗಿ:
ಪಂದ್ಯಾವಳಿಯಲ್ಲಿ ಕ್ಯೂಬಾ ದೇಶದ ಪೈಲ್ವಾನರು ಸೇರಿದಂತೆ ಮಹಾರಾಷ್ಟ್ರ, ಹರಿಯಾಣ ಹಾಗೂ ವಿವಿಧ ರಾಜ್ಯಗಳ 60ಕ್ಕೂ ಹೆಚ್ಚು ಜೋಡಿ ಪುರುಷ ಪೈಲ್ವಾನರು ಭಾಗವಹಿಸಿದ್ದರು. ನಾಲ್ಕು ಜೋಡಿ ಮಹಿಳಾ ಪೈಲ್ವಾನರು ಕೂಡ ಅಖಾಡದಲ್ಲಿ ತಮ್ಮ ಕುಸ್ತಿ ಕೌಶಲವನ್ನು ಪ್ರದರ್ಶಿಸಿದ್ದು ವಿಶೇಷವಾಗಿತ್ತು. ದೇಶ-ವಿದೇಶದ ಕುಸ್ತಿಪಟುಗಳ ಭಾಗವಹಿಸುವಿಕೆಯಿಂದ ಪಂದ್ಯಾವಳಿಗೆ ಮತ್ತಷ್ಟು ಮೆರುಗು ದೊರೆಯಿತು.
ಇದನ್ನೂ ಓದಿ:
ಪಂದ್ಯಾವಳಿಯಲ್ಲಿ ಮಹಾರಾಷ್ಟ್ರದ ಸಿಕಂದರ್ ಶೇಖ್ ಅವರು ಕ್ಯೂಬಾದ ಪೈಲ್ವಾನ್ ಕಾಸ್ಟನೆಡಾ ಕಾರ್ಡೆನಾಸ್ ವಿರುದ್ಧ ಜಯ ಸಾಧಿಸಿದರು. ಬೆಳಗಾವಿ ಜಿಲ್ಲೆಯ ಕಂಗ್ರಾಳಿ ಗ್ರಾಮದ ಪೈಲ್ವಾನ್ ಕಾಮೇಶ್ ಪಾಟೀಲ ಅವರು ಪುಣೆಯ ಸತೀಶ್ ಮುಡೆ ವಿರುದ್ಧ ಗೆಲುವು ದಾಖಲಿಸಿದರು. ಕಾರ್ತಿಕ್ ಕಾಟೆ ಅವರು ಮಹೇಶ್ ವಿರುದ್ಧ ಹಾಗೂ ಪ್ರಥಮೇಶ್ ಕಟ್ಟಿಕರ್ ಅವರು ಮಹಾರಾಷ್ಟ್ರದ ಸುಹೇಲ್ ವಿರುದ್ಧ ಜಯಗಳಿಸಿದರು.
ಸಾವಿರಾರು ಪ್ರೇಕ್ಷಕರಿಂದ ವೀಕ್ಷಣೆ :
ಕುಸ್ತಿ ಪಂದ್ಯಾವಳಿಯನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಪೈಲ್ವಾನರ ರೋಚಕ ಸೆಣಸಾಟಕ್ಕೆ ಪ್ರೇಕ್ಷಕರು ಚಪ್ಪಾಳೆ ತಟ್ಟಿ, ಹರ್ಷೋದ್ಗಾರಗಳ ಮೂಲಕ ಹುರಿದುಂಬಿಸಿದರು. ಸಾಂಪ್ರದಾಯಿಕ ಕ್ರೀಡೆಯಾದ ಕುಸ್ತಿಯ ಮೇಲಿನ ಜನರ ಆಸಕ್ತಿ ಹಾಗೂ ಗ್ರಾಮೀಣ ಕ್ರೀಡಾ ಪರಂಪರೆಯ ಮಹತ್ವ ಪಂದ್ಯಾವಳಿಯ ಮೂಲಕ ಮತ್ತೊಮ್ಮೆ ಅನಾವರಣಗೊಂಡಿತು.
ಐತಿಹಾಸಿಕ ಪರಂಪರೆ, ನಾಡಿನ ಸಂಸ್ಕೃತಿ, ಜಾನಪದ ಕಲೆ ಹಾಗೂ ವಿವಿಧ ಕ್ರೀಡೆಗಳ ಸಮ್ಮಿಲನವಾಗಿರುವ ಕಿತ್ತೂರು ಉತ್ಸವದಲ್ಲಿ ಕುಸ್ತಿ ಪಂದ್ಯಾವಳಿ ವಿಶೇಷ ಆಕರ್ಷಣೆಯಾಗಿ ಮೂಡಿಬಂದಿತು. ಪೈಲ್ವಾನರ ಶೌರ್ಯ ಮತ್ತು ಕ್ರೀಡಾಸ್ಫೂರ್ತಿಗೆ ಸಾಕ್ಷಿಯಾದ ಅಖಾಡವು ಉತ್ಸವದ ವೈಭವಕ್ಕೆ ಮತ್ತಷ್ಟು ಮೆರುಗು ನೀಡಿತು.



