ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಹಾರ ಸುರಕ್ಷತೆ ನಿಯಮಗಳ ಅನುಷ್ಠಾನ ಮತ್ತು ಅಧಿಕಾರ ಹಂಚಿಕೆ ವಿಚಾರವಾಗಿ ಕೇಂದ್ರ ಹಾಗೂ ಮಹಾರಾಷ್ಟ್ರ ಸರ್ಕಾರಗಳ ನಡುವೆ ಕಾನೂನು ಸಂಘರ್ಷ ಆರಂಭವಾಗಿದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಜಾರಿಗೊಳಿಸಿರುವ ಕೆಲವು ನಿಯಮಗಳ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಕೇಂದ್ರ ಸಂಸ್ಥೆಯು ರಾಜ್ಯದ ಅಧಿಕಾರ ವ್ಯಾಪ್ತಿಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂಬುದು ಸರ್ಕಾರದ ಪ್ರಮುಖ ಆಕ್ಷೇಪವಾಗಿದೆ.
ರಾಜ್ಯದ ಅಧಿಕಾರ ಮೊಟಕುಗೊಳಿಸಲಾಗಿದೆಯೇ?
ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತದ ಆಯುಕ್ತ ತುಕಾರಾಂ ಮುಂಡೆ ಅವರ ಮೂಲಕ ಈ ಅರ್ಜಿ ಸಲ್ಲಿಸಲಾಗಿದೆ. FSSAI ಕೇಂದ್ರ ಆಹಾರ ಸುರಕ್ಷತಾ ಅಧಿಕಾರಿಗಳನ್ನು ನೇಮಿಸುವ ಮೂಲಕ ರಾಜ್ಯದ ಆಹಾರ ಸುರಕ್ಷತಾ ಆಯುಕ್ತರ ಪರವಾನಗಿ ನೀಡುವ ಮತ್ತು ನಿಯಮ ಉಲ್ಲಂಘನೆಗಳ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವನ್ನು ಸೀಮಿತಗೊಳಿಸಿದೆ ಎಂದು ರಾಜ್ಯ ಸರ್ಕಾರ ಅರ್ಜಿಯಲ್ಲಿ ಆಕ್ಷೇಪಿಸಿದೆ.
ಇದನ್ನೂ ಓದಿ:
2006ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ರಾಜ್ಯಗಳಿಗೆ ನೀಡಿರುವ ಅಧಿಕಾರವನ್ನು ಹೊಸ ವ್ಯವಸ್ಥೆಯ ಮೂಲಕ ದುರ್ಬಲಗೊಳಿಸಲಾಗಿದೆ ಎಂಬುದು ಸರ್ಕಾರದ ವಾದವಾಗಿದೆ.
2023ರ ಆದೇಶ, ಹೊಸ ಅಧಿಸೂಚನೆಗೆ ಆಕ್ಷೇಪ
2023ರ ಮೇ ತಿಂಗಳಲ್ಲಿ ಹೊರಡಿಸಲಾದ ಆದೇಶವು ಕೇಂದ್ರ ಪರವಾನಗಿ ಹೊಂದಿರುವ ಆಹಾರ ಉದ್ಯಮಗಳ ಪರಿಶೀಲನೆಗೆ ರಾಜ್ಯ ಅಧಿಕಾರಿಗಳಿಗೆ ನಿರ್ಬಂಧ ವಿಧಿಸಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಆಹಾರ ಉದ್ಯಮಗಳ ಪರವಾನಗಿ ಮತ್ತು ನೋಂದಣಿಗೆ ಬಳಸುವ FoSCoS ಆನ್‌ಲೈನ್ ವ್ಯವಸ್ಥೆಯ ಮೇಲಿನ ನಿಯಂತ್ರಣವೂ ವಿವಾದದ ಭಾಗವಾಗಿದೆ.
ಇದರ ಜೊತೆಗೆ, ಈ ವರ್ಷದ ಮಾರ್ಚ್‌ನಲ್ಲಿ ಸಾರ್ವಜನಿಕ ಸಮಾಲೋಚನೆ ನಡೆಸದೆ ವಹಿವಾಟಿನ ಮಿತಿಗಳನ್ನು ಹೆಚ್ಚಿಸಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ಪ್ರಶ್ನಿಸಿದೆ. ವಿವಾದಿತ ನಿಯಮಗಳಿಗೆ ತಡೆ ನೀಡಬೇಕು ಮತ್ತು ಪರವಾನಗಿ ದತ್ತಾಂಶದ ಮೇಲಿನ ರಾಜ್ಯದ ನಿಯಂತ್ರಣವನ್ನು ಮರುಸ್ಥಾಪಿಸಬೇಕು ಎಂಬುದು ಅದರ ಬೇಡಿಕೆಯಾಗಿದೆ.
ಹೈಕೋರ್ಟ್ ವಿಚಾರಣೆಗೆ ಅರ್ಜಿ
ಆಹಾರ ಸುರಕ್ಷತಾ ಮಾನದಂಡಗಳನ್ನು ರೂಪಿಸುವುದು, ಪ್ರಯೋಗಾಲಯಗಳಿಗೆ ಮಾನ್ಯತೆ ನೀಡುವುದು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ತಾಂತ್ರಿಕ ಸಲಹೆ ಒದಗಿಸುವುದು FSSAIಯ ಪ್ರಮುಖ ಜವಾಬ್ದಾರಿಗಳಾಗಿವೆ.
ಈ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮಹೇಶ್ ಸಿ. ತ್ರಿಪಾಠಿ ಮತ್ತು ನ್ಯಾಯಮೂರ್ತಿ ಅದ್ವೈತ್ ಸೇಠ್ನಾ ಅವರ ಪೀಠ ವಿಚಾರಣೆ ನಡೆಸಲಿದೆ.



