October 26, 2026
Monday, October 26, 2026
spot_img

WEATHER | ಕರ್ನಾಟಕದಲ್ಲಿ ತಗ್ಗಿದ ಮಳೆ ಅಬ್ಬರ: ಮುಂದಿನ ಎರಡು ದಿನ ಹವಾಮಾನ ಹೇಗಿರುತ್ತೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಬಿಡುವು ನೀಡದೆ ಸುರಿಯುತ್ತಿದ್ದ ಮಳೆಯ ಅಬ್ಬರ ಈಗ ತಗ್ಗಿದೆ. ಮುಂಗಾರು ಮರೆಯಾಗುತ್ತಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅಕ್ಟೋಬರ್ 26ರಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ. ಆದರೆ ಅಕ್ಟೋಬರ್ 27ರಂದು ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಾತ್ರ ಹಗುರವಾದ ಮಳೆಯಾಗುವ ಸಾಧ್ಯತೆಯಿದೆ.

ಇನ್ನು ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಒಣ ಹವೆಯ ವಾತಾವರಣವಿರಲಿದೆ. ಇದರೊಂದಿಗೆ ಈ ಪ್ರದೇಶಗಳಲ್ಲಿ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ನಿರಂತರವಾಗಿ ಗಾಳಿ ಬೀಸುವ ಮುನ್ಸೂಚನೆ ಇದೆ.

ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಾತ್ರ ಮಳೆಯ ಪ್ರಭಾವ ಮುಂದುವರಿಯಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಕೋಲಾರ, ಮೈಸೂರು, ರಾಮನಗರ ಮತ್ತು ತುಮಕೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯಾಗಲಿದೆ.

ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ರಾಮನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ಇದೆ. ವಿಶೇಷವಾಗಿ ಈ ಜಿಲ್ಲೆಗಳಲ್ಲಿ ಮಳೆಯ ಜತೆಗೆ ಗಂಟೆಗೆ 30 ರಿಂದ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯೂ ಇದೆ. ಉಳಿದಂತೆ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಕೊಡಗು, ಚಿಕ್ಕಬಳ್ಳಾಪುರ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಮಂಡ್ಯ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಮಳೆಯಿಲ್ಲದೆ ಒಣ ಹವೆಯೇ ಮುಂದುವರಿಯಲಿದೆ.

Must Read

Skip to toolbar