ಹೊಸದಿಗಂತ ವರದಿ ಕಲಬುರಗಿ:
ಜಾತಿಭೇದ ಮರೆತು ಪರಸ್ಪರ ಪ್ರೀತಿ, ಸಾಮರಸ್ಯ ಮತ್ತು ಸಂಘಟಿತ ಭಾವನೆ ಬೆಳೆಸುವ ಮೂಲಕ ಸಮರ್ಥ, ನಿಸ್ವಾರ್ಥ ವ್ಯಕ್ತಿಗಳ ತಂಡ ನಿರ್ಮಿಸುವುದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಉದ್ದೇಶವಾಗಿದೆ ಎಂದು ಸಂಘದ ಪ್ರಾಂತ ಪ್ರಚಾರಕ ನರೇಂದ್ರ ಜಿ ಹೇಳಿದರು.

ನಗರದಲ್ಲಿ ನಡೆದ ವಿಜಯದಶಮಿ ಹಿನ್ನೆಲೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಕಲಬುರಗಿ ನಗರದಿಂದ ನಡೆದ ಗಣವೇಷಧಾರಿಗಳ ಆಕರ್ಷಕ ಪಥಸಂಚಲನ ಬಳಿಕ ನಗರದ ಶರಣಬಸವೇಶ್ವರರ ಜಾತ್ರಾ ಮೈದಾನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ವಕ್ತಾರರಾಗಿ ಆಗಮಿಸಿ ಮಾತನಾಡಿದ ಅವರು, 1925ರಲ್ಲಿ ಆರಂಭವಾದ ಸಂಘದ ಕಾರ್ಯ ಇಂದು ದೇಶದ 83 ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ವಿಸ್ತರಿಸಿದೆ. ಒಂದು ಲಕ್ಷಕ್ಕೂ ಅಧಿಕ ಚಟುವಟಿಕೆಗಳ ಮೂಲಕ ಸಮಾಜದ ವಿವಿಧ ವರ್ಗಗಳನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದರು.
ಸಂಘವನ್ನು ದೂರದಿಂದ ನೋಡಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಅದರ ಕಾರ್ಯವೈಖರಿಯನ್ನು ಹತ್ತಿರದಿಂದ ಗಮನಿಸಿದಾಗ ಉದ್ದೇಶ ತಿಳಿಯುತ್ತದೆ. ಸಂಘದ ಶಾಖೆಗಳಲ್ಲಿ ಜಾತಿಯ ಆಧಾರದ ಮೇಲೆ ಯಾವುದೇ ಭೇದಭಾವವಿಲ್ಲ. ಎಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ಬೆರೆಯುತ್ತಾರೆ ಎಂದು ಹೇಳಿದರು.
ಭಾರತದ ಸಾಂಸ್ಕೃತಿಕ ಪರಂಪರೆ, ವಿಜಯದಶಮಿ ಮತ್ತು ದೀಪಾವಳಿ ಹಬ್ಬಗಳ ಐತಿಹಾಸಿಕ ಮಹತ್ವವನ್ನು ವಿವರಿಸಿದ ಅವರು, ದೇಶದ ಉನ್ನತಿಗಾಗಿ ಪ್ರತಿಯೊಬ್ಬರಲ್ಲೂ ಸ್ವಾಭಿಮಾನ ಮತ್ತು ದೇಶಪ್ರೇಮ ಬೆಳೆಸಬೇಕು. ಕುಟುಂಬ ವ್ಯವಸ್ಥೆ ಹಾಗೂ ಸಾಂಪ್ರದಾಯಿಕ ಮೌಲ್ಯಗಳನ್ನು ಉಳಿಸುವತ್ತ ಪೋಷಕರು ಗಮನಹರಿಸಬೇಕು ಎಂದರು.
ಶುದ್ಧ ಸಾತ್ವಿಕ ಪ್ರೀತಿಯ ಮೂಲಕ ಸಮಾಜವನ್ನು ಒಗ್ಗೂಡಿಸುವುದೇ ಸಂಘದ ಕಾರ್ಯದ ಆಧಾರವಾಗಿದೆ. ಪ್ರತಿಯೊಬ್ಬರೂ ತಮ್ಮ ಬಡಾವಣೆ ಹಾಗೂ ಕಲಬುರಗಿಯನ್ನು ಸಾಮರಸ್ಯದ ಸಮಾಜವನ್ನಾಗಿ ರೂಪಿಸಲು ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ಪುಷ್ಪವೃಷ್ಟಿಗೈದು ಪಥಸಂಚಲನಕ್ಕೆ ಸ್ವಾಗತ
ಇದಕ್ಕೂ ಮುನ್ನ ನಗರದ ಎಪಿಎಂಸಿ ಆವರಣದಿಂದ ಆರಂಭವಾದ ಪಥಸಂಚಲನ ಪ್ರಮುಖ ಮಾರ್ಗಗಳಲ್ಲಿ ಸಾಗಿ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಸಂಪನ್ನಗೊಂಡಿತು. ಮಾರ್ಗದುದ್ದಕ್ಕೂ ಪುಟಾಣಿ ಮಕ್ಕಳು ಮಹಾಪುರುಷರ ವೇಷಧರಿಸಿ ಸ್ವಯಂಸೇವಕರನ್ನು ಸ್ವಾಗತಿಸಿದರು. ಸಾರ್ವಜನಿಕರು ಪುಷ್ಪವೃಷ್ಟಿ ಮಾಡಿ ಭಾರತ ಮಾತಾ ಕೀ ಜೈ, ವಂದೇ ಮಾತರಂ ಘೋಷಣೆ ಮೊಳಗಿಸಿದರು. ಪಥಸಂಚಲನದಲ್ಲಿ 1,000ಕ್ಕೂ ಅಧಿಕ ಗಣವೇಷಧಾರಿ ಸ್ವಯಂಸೇವಕರು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಫ್ಟವೇರ್ ಇಂಜನಿಯರ್ ವೆಂಕಟೇಶ ಗಿಲ್ಡಾ ವಹಿಸಿದ್ದರು.ವಿಭಾಗ ಪ್ರಚಾರಕ ವಿಜಯ ಮಾಹಾಂತೇಶ, ಜಿಲ್ಲಾ ಕಾರ್ಯವಾಹ ಮಲ್ಲಿನಾಥ ಅವರಾದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.



