ಹೊಸದಿಗಂತ ವರದಿ ಬೆಳಗಾವಿ:
ಕಿತ್ತೂರು ರಾಣಿ ಚನ್ನಮ್ಮ ಕನ್ನಡ ನಾಡಿನ ದಿಟ್ಟ ಹೋರಾಟಗಾರ್ತಿ. ಚನ್ನಮ್ಮಳ ಧೈರ್ಯ ಇತಿಹಾಸ ಅಲ್ಲ; ಭವಿಷ್ಯದ ನವಪೀಳಿಗೆಗೆ ಸ್ವಾಭಿಮಾನದ ಪಾಠ. ಚನ್ನಮ್ಮಳ ಸಾಹಸ ನಮಗೆಲ್ಲ ಸ್ಫೂರ್ತಿ, ಅವರ ತ್ಯಾಗ ಅಜರಾಮರವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಭಾನುವಾರ ಚನ್ನಮ್ಮನ ಕಿತ್ತೂರಿನ ಕಿತ್ತೂರು ಕೋಟೆಯ ಆವರಣದ ರಾಣಿ ಚನ್ನಮ್ಮ ವೇದಿಕೆಯಲ್ಲಿ ಜರುಗಿದ ಚನ್ನಮ್ಮನ ಕಿತ್ತೂರ ಉತ್ಸವ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಿತ್ತೂರು ವಿಜಯೋತ್ಸವ ದೀಪವು ಜನರ ಅಭಿವೃದ್ದಿಗೂ ಬೆಳಕಾಗಬೇಕು. ಈ ನಿಟ್ಟಿನಲ್ಲಿ ಸರಕಾರ ಕ್ರಮ ವಹಿಸಲಿದೆ. ಜನರ ಮನೆಬಾಗಿಲಿಗೆ ತೆರಳಿ ಅವರ ಅಹವಾಲುಗಳನ್ನು ಸ್ಥಳೀಯವಾಗಿ ಪರಿಹರಿಸಲು ಪ್ರಜಾಸೇವೆ ಇಲಾಖೆಯನ್ನು ಆರಂಭಿಸಲಾಗಿದೆ. ಕಿತ್ತೂರು ರಾಣಿ ಚನ್ನಮ್ಮಳ ಸ್ವಾಭಿಮಾನ, ಶೌರ್ಯ ಸಾಹಸದ ಪರಂಪರೆ ಈ ನೆಲದಲ್ಲಿ ಮುಂದುವರಿದಿದೆ.
ಚನ್ನಮ್ಮ ಫ್ರೀಡಂ ಪಾರ್ಕ್ ನಿರ್ಮಾಣದ ಭರವಸೆ:
ಕೋಟೆಯ ಆವರಣದಲ್ಲಿ ಇತಿಹಾಸದ ಮಹತ್ವ ಸಾರಲು ಅನಾವರಣಗೊಳಿಸಲು ದೃಶ್ಯಕಾವ್ಯ ರೂಪದ “ಫ್ರೀಡಂ ಪಾರ್ಕ್” ನಿರ್ಮಿಸಬೇಕು ಎಂಬ 40 ಕೋಟಿ ರೂಪಾಯಿ ವೆಚ್ಚದಲ್ಲಿ ಬೇಡಿಕೆಯನ್ನು ಶಾಸಕರು ಇಟ್ಟಿದ್ದು ಈ ಫ್ರೀಡಂ ಪಾರ್ಕ್ ನಿರ್ಮಾಣಕ್ಕೆ ಮುಂದಿನ ಬಜೆಟ್ ನಲ್ಲಿ ಅನುದಾನ ನೀಡಲಾಗುವುದು. ಈ ಬಗ್ಗೆ ತಕ್ಷಣವೇ ಸರಕಾರಿ ಆದೇಶವನ್ನೂ ಮಾಡಲಾಗುವುದು ಎಂದರು.
ಕಿತ್ತೂರು ರಾಣಿ ಚನ್ನಮ್ಮ ರಸ್ತೆ ಸಾರಿಗೆ ಸಂಸ್ಥೆ:
ವಾಯವ್ಯ ರಸ್ತೆ ಸಾರಿಗೆ ನಿಗಮದ ಹೆಸರನ್ನು ಮುಂಬರುವ ದಿನಗಳಲ್ಲಿ “ಕಿತ್ತೂರು ರಾಣಿ ಚನ್ನಮ್ಮ ರಸ್ತೆ ಸಾರಿಗೆ ಸಂಸ್ಥೆ” ಎಂದು ನಾಮಕರಣ ಮಡಲಾಗುವುದು. ಕಿತ್ತೂರು ಭಾಗಕ್ಕೆ ಅನುಕೂಲವಾಗುವಂತೆ 520 ಕೋಟಿ ರೂಪಾಯಿ ವೆಚ್ಚದ ಚನ್ನವೃಷಭೇಂದ್ರ ನೀರಾವರಿ ಯೋಜನೆಗೂ ಅಗತ್ಯ ಅನುದಾನ ನೀಡಲಾಗುವುದು ಎಂದರು.
ಜನರು ಅಧಿಕಾರ ನೀಡಿದ್ದಾರೆ:
ಅವರ ಋಣವನ್ನು ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಕಿತ್ತೂರು ಚನ್ನಮ್ಮ ಎಲ್ಲರ ಬದುಕಿಗೆ ಮಾದರಿಯಾಗಲಿ ಎಂದು ಮುಖ್ಯ ಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರು ಹೇಳಿದರು.
ಸಮಾರೋಪ ಭಾಷಣ ಮಾಡಿದ ಸಾಹಿತಿ ಪ್ರೊ. ಸಬಿತಾ ಬನ್ನಾಡಿ ಅವರು, ದಾಸ್ಯದ ನರಕಕ್ಕಿಂತ ಸ್ವಾತಂತ್ರ್ಯದ ಸ್ವರ್ಗವೆ ಲೇಸು ಎಂಬ ಚನ್ನಮ್ಮಾಜಿಯ ನಿಲುವನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಷ್ಟೋ ಹೋರಾಟಗಾರರನ್ನು ನಾವು ಮರೆತಿರಬಹುದು. ಆದರೆ ಕಿತ್ತೂರು ಚನ್ನಮ್ಮಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನ್ಯಾಯ, ನೀತಿ, ಜನಾನುರಾಗದಿಂದ ಗೆಲುವು ಖಂಡಿತವಾಗಿ ದೊರಕುತ್ತದೆ ಎಂಬುವುದಕ್ಕೆ ರಾಣಿ ಚನ್ನಮ್ಮ ಉದಾಹರಣೆ ಎಂಬುದನ್ನು ನಾವು ಇತಿಹಾಸದಿಂದ ತಿಳಿಯಬಹುದಾಗಿದೆ ಎಂದರು.

ಬ್ರಿಟಿಷರ ಕಾಲದಲ್ಲಿ ದೇಶದ ಎಲ್ಲ ರಾಜರು ಒಂದಾಗಿ ಹೊರಾಡಿದ್ದರೆ ಬ್ರಟಿಷರನ್ನು ಸದೆಬಡಿಯ ಬಹುದಾಗಿತ್ತು. ಕಿತ್ತೂರಿನ ಕೆಲ ಕುತಂತ್ರಿಗಳಿಂದಾಗಿ ಚನ್ನಮ್ಮ ಯುದ್ಧದಲ್ಲಿ ಮೋಸದಿಂದ ಯುದ್ಧದಲ್ಲಿ ಸೋಲಬೇಕಾಯಿತು. ಕುತಂತ್ರಿಗಳು ಬ್ರಿಟಿಷರಿಗೆ ಸಹಾಯ ಮಾಡದೆ ಇದ್ದಲ್ಲಿ ಕಿತ್ತೂರು ರಾಣಿ ಚನ್ನಮ್ಮಳನ್ನು ಬ್ರಿಟಿಷರು ಎಂದಿಗೂ ಸೋಲಿಸಲು ಸಾಧ್ಯವಾಗುತ್ತಿರಲಿಲ್ಲ.
ಜ್ಞಾನ ದ ಶಕ್ತಿ ಮುಂದೆ ಯಾವುದೆ ಶಕ್ತಿ ಇರುವುದಿಲ್ಲ. ಚನ್ನಮ್ಮಳಂತೆ ಪ್ರತಿ ಮಹಿಳೆಯನ್ನು ಬೆಳೆಸುವುದರ ಮೂಲಕ ನಾಡನ್ನು ಸಶಕ್ತ ನಾಡನ್ನಾಗಿಸಬಹುದಾಗಿದೆ ಎಂದು ಸಬಿತಾ ಬನ್ನಾಡಿ ಅಭಿಪ್ರಾಯಪಟ್ಟರು.
ಸಕ್ಕರೆ ಹಾಗೂ ಜವಳಿ ಸಚಿವ ರುದ್ರಪ್ಪ ಲಮಾಣಿ ಅವರು ಮಾತನಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಕಿತ್ತೂರು ಚನ್ನಮ್ಮಳ ಹೆಸರು ಅಜರಾಮರವಾಗಿದೆ. ಅವರ ಸ್ವಾಭಿಮಾನ, ಅಭಿಮಾನಕ್ಕೆ ಗೌರವ ನೀಡುವ ಉದ್ದೇಶದೊಂದಿಗೆ ಸರಕಾರದ ವತಿಯಿಂದ ಪ್ರತಿ ವರ್ಷ ಅದ್ದೂರಿಯಾಗಿ ಅಚರಿಸಲಾಗುತ್ತಿದೆ ಎಂದರು.
ಇದನ್ನೂ ಓದಿ:
ಶಾಸಕರಾದ ಬಾಬಸಾಹೇಬ ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಿತ್ತೂರು ನಾಡಿನಲ್ಲಿ 202ನೇ ವಿಜಯೋತ್ಸವ ಆಚರಿಸಲಾಗುತ್ತಿದೆ. ಈ ನಾಡು ಸ್ವಾಭಿಮಾನದ ನಾಡಾಗಿದೆ. ಚನ್ನಮ್ಮಾಜಿ ಇತಿಹಾಸವನ್ನು ಹೊಸ ಪೀಳಿಗೆಗೆ ನೀಡುವ ಉದ್ದೇಶದೊಂದಿಗೆ ಅವರ ಇತಿಹಾಸವನ್ನು ಪಠ್ಯಪುಸ್ತಕದಲ್ಲಿ ಅಳವಡಿಸಲು ಮನವಿ ಮಾಡಿದರು. ಚನ್ನಮ್ಮ ಪ್ರೀಡಂಪಾರ್ಕ ಸ್ಥಾಪನೆಯ ಹೊಸ ಯೋಜನೆಗೆ ಅನುಮೋದನೆ ನೀಡುವುದುರ ಮೂಲಕ ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ಹಾಗೂ ಚನ್ನಮ್ಮಳ ಇತಿಹಾಸ ಪಸರಿಸಲು ಅನುಕೂಲಕ ಮಾಡಿಕೊಡಲು ಕೋರಿದರು.
ಚನ್ನಮ್ಮನ ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮ.ನಿ.ಪ್ರ. ಸ್ವಾಮೀಜಿ ಮಡಿವಾಳ ರಾಜಯೋಗೇಂದ್ರ ಮಹಾಸ್ವಾಮಿಗಳು, ನಿಚ್ಚಣಕಿಯ ಶ್ರೀಗುರು ಮಡಿವಾಳೇಶ್ವರ ಮಠದ ಶ್ರೀ ಮ.ನಿ.ಪ್ರ.ಸ್ವ. ಪಂಚಾಕ್ಷರಿ ಮಹಾಸ್ವಾಮಿಗಳು, ಕಾದರವಳ್ಳಿ ಸೀಮಿಮಠದ ಡಾ.ಪಾಲಾಕ್ಷ ಶಿವಯೋಗಿಶ್ವರ ಮಹಾಸ್ವಾಮಿ, ಬೈಲೂರು ನಿಷ್ಕಲ ಮಂಟಪದ ನಿಜಗುಣ ತೋಂಟದಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಈ ವೇಳೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಅಶೋಕ ಪಟ್ಟಣ, ಮಹಾಂತೇಶ ಕೌಜಲಗಿ, ಶಾಸಕ ಆಸೀಪ್ ಸೇಠ, ವಿಶ್ವಾಸ ವೈದ್ಯ, ಎನ್.ಎಚ್. ಕೋನರಡ್ಡಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ, ಚನ್ನರಾಜ್ ಹಟ್ಟಿಹೊಳಿ, ಭರಮಣ್ಣ ಉಪ್ಪಾರ, ಅಡಿವೇಶ ಇಟಗಿ, ಜೈಸಿದ್ರಾಮ್ ಮಾರಿಹಾಳ, ಸೇರಿದಂತೆ ಇತರರು ಪಾಲ್ಗೊಂಡಿದ್ದರು.



