October 26, 2026
Monday, October 26, 2026
spot_img

ಮುಂಬೈನಲ್ಲಿ ಕೃಷ್ಣ ದಾಸ್ ಕೀರ್ತನೆ ನಾದಕ್ಕೆ ಚಪ್ಪಾಳೆ ತಟ್ಟಿ, ಶ್ಲೋಕ ಹಾಡಿದ ವಿರಾಟ್-ಅನುಷ್ಕಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಕ್ರಿಕೆಟ್‌ನ ದಿಗ್ಗಜ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜೋಡಿ ಮುಂಬೈನಲ್ಲಿ ನಡೆದ ವಿಶೇಷ ಆಧ್ಯಾತ್ಮಿಕ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಅಮೆರಿಕದ ಪ್ರಸಿದ್ಧ ಭಕ್ತಿ ಗಾಯಕ ಕೃಷ್ಣ ದಾಸ್ ಅವರ ಭಾರತ ಪ್ರವಾಸದ ಭಾಗವಾಗಿ ಆಯೋಜಿಸಲಾಗಿದ್ದ ಲೈವ್ ಕೀರ್ತನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಈ ದಂಪತಿ, ಭಕ್ತಿ ಸಾಗರದಲ್ಲಿ ಮುಳುಗಿದ್ದರು.

ಭಾನುವಾರ ನಡೆದ ಈ ಕೀರ್ತನ ಸಂಜೆಯಲ್ಲಿ ಭಾಗವಹಿಸುವ ಮುನ್ನ ಈ ಜೋಡಿ ‘ಗೇಟ್‌ವೇ ಆಫ್ ಇಂಡಿಯಾ’ ಬಳಿ ಆಗಮಿಸಿರುವ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕಾರ್ಯಕ್ರಮದ ವೀಡಿಯೊ ಒಂದರಲ್ಲಿ, ಅನುಷ್ಕಾ ಶರ್ಮಾ ಅತ್ಯಂತ ಉತ್ಸಾಹದಿಂದ ಚಪ್ಪಾಳೆ ತಟ್ಟುತ್ತಾ ಭಕ್ತಿ ಗೀತೆಗಳನ್ನು ಹಾಡುತ್ತಿರುವುದು ಕಂಡುಬಂದಿದೆ. ಮತ್ತೊಂದೆಡೆ, ವಿರಾಟ್ ಕೊಹ್ಲಿ ಕ್ಯಾಮೆರಾ ಕಡೆಗೆ ಒಮ್ಮೆ ನೋಡಿ, ತಕ್ಷಣವೇ ಕಣ್ಣು ಮುಚ್ಚಿ ಪೂರ್ಣ ಗಮನವನ್ನು ಕೀರ್ತನೆಯತ್ತ ಹರಿಸಿ ಭಕ್ತಿಯಲ್ಲಿ ಮಗ್ನರಾಗಿದ್ದರು.

ವಿರಾಟ್ ಹಾಗೂ ಅನುಷ್ಕಾ, ಕೃಷ್ಣ ದಾಸ್ ಅವರ ಕೀರ್ತನೆಯಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲೇನಲ್ಲ. ಜುಲೈ 2026 ರಲ್ಲಿ ಲಂಡನ್‌ನ ಯೂನಿಯನ್ ಚಾಪೆಲ್‌ನಲ್ಲಿ ನಡೆದ ಕೃಷ್ಣ ದಾಸ್ ಅವರ ಕಾರ್ಯಕ್ರಮಕ್ಕೂ ಈ ದಂಪತಿ ಹಾಜರಾಗಿದ್ದರು. ಈ ಮುಂಚೆಯೂ ದೇಶ-ವಿದೇಶಗಳಲ್ಲಿ ನಡೆಯುವ ಇಂತಹ ಹಲವು ಕಾರ್ಯಕ್ರಮಗಳಲ್ಲಿ ಈ ಜೋಡಿ ಭಾಗವಹಿಸಿದೆ. ಇಬ್ಬರೂ ಸಹ ನೀಮ್ ಕರೋಲಿ ಬಾಬಾ ಅವರ ಬೋಧನೆಗಳಲ್ಲಿ ಆಳವಾದ ನಂಬಿಕೆ ಉಳ್ಳವರಾಗಿದ್ದು, ಆಗಾಗ ವೃಂದಾವನದಲ್ಲಿರುವ ಪ್ರೇಮಾನಂದ ಮಹಾರಾಜರ ಆಶ್ರಮಕ್ಕೂ ಭೇಟಿ ನೀಡಿ ಆಶೀರ್ವಾದ ಪಡೆಯುತ್ತಿರುತ್ತಾರೆ.

https://www.instagram.com/reel/De7W7UHTG5D/?utm_source=ig_web_button_share_sheet

ಮೈದಾನದಲ್ಲಿ ಅಗ್ರೆಸಿವ್ ಆಟಗಾರನಾಗಿ ಮಿಂಚುವ ವಿರಾಟ್ ಮತ್ತು ನಟಿ ಅನುಷ್ಕಾ, ಈ ರೀತಿಯ ಶಾಂತ ಹಾಗೂ ಧಾರ್ಮಿಕ ವಾತಾವರಣದಲ್ಲಿ ಸರಳ ಉಡುಪಿನಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ತೀವ್ರ ಸಂತಸ ತಂದಿದೆ. ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಇವರ ಈ ಕೀರ್ತನ ವೀಡಿಯೊಗಳು ಮತ್ತು ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಈ ಜೋಡಿಯ ಸರಳತೆಗೆ ಅಭಿಮಾನಿಗಳು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

Must Read