ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, 2018 ರಲ್ಲಿ ದಾಖಲಾಗಿದ್ದ ಬಹುಚರ್ಚಿತ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ವಜಾಗೊಳಿಸಿ ನ್ಯಾಯಾಲಯ ಆದೇಶಿಸಿದೆ. ಸೋಮವಾರ ದೆಹಲಿಯಿಂದ ಸುಲ್ತಾನಪುರಕ್ಕೆ ಆಗಮಿಸಿ ನ್ಯಾಯಾಲಯದ ವಿಚಾರಣೆಯಲ್ಲಿ ರಾಗಾ ಖುದ್ದು ಹಾಜರಿದ್ದರು.
ಏನಿದು ಪ್ರಕರಣ?
2018 ರ ಆಗಸ್ಟ್ನಲ್ಲಿ ಕರ್ನಾಟಕದ ಬೆಂಗಳೂರಿನಲ್ಲಿ ನಡೆದ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿಯೊಂದನ್ನು ನಡೆಸಿದ್ದರು. ಈ ವೇಳೆ ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಪ್ರಸ್ತುತ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ರಾಹುಲ್ ಗಾಂಧಿ ಆಕ್ಷೇಪಾರ್ಹ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ಬಿಜೆಪಿಯ ಪ್ರಾಮಾಣಿಕತೆಯ ಬಗ್ಗೆ ಪ್ರಶ್ನಿಸುವಾಗ ರಾಹುಲ್ ಗಾಂಧಿ ಬಳಸಿದ್ದ ಕೆಲವು ಪದಗಳು ವಿವಾದಕ್ಕೆ ಕಾರಣವಾಗಿದ್ದವು. ರಾಹುಲ್ ಗಾಂಧಿ ಅವರ ಈ ಹೇಳಿಕೆಯನ್ನು ವಿರೋಧಿಸಿ ಸುಲ್ತಾನ್ಪುರದ ಬಿಜೆಪಿ ನಾಯಕ ಹಾಗೂ ಜಿಲ್ಲಾ ಸಹಕಾರಿ ಬ್ಯಾಂಕ್ನ ಮಾಜಿ ಅಧ್ಯಕ್ಷ ವಿಜಯ್ ಮಿಶ್ರಾ ಅವರು ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ನಂತರ ಕೋರ್ಟ್ ರಾಗಾಗೆ ಸಮನ್ಸ್ ಜಾರಿ ಮಾಡಿತ್ತು. ಫೆಬ್ರವರಿ 2024 ರಲ್ಲಿ ತಮ್ಮ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯನ್ನು ಅರ್ಧಕ್ಕೆ ನಿಲ್ಲಿಸಿದ್ದ ರಾಹುಲ್ ಗಾಂಧಿ, ಸುಲ್ತಾನ್ಪುರ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಿ ಜಾಮೀನು ಪಡೆದುಕೊಂಡಿದ್ದರು. ಕಳೆದ ಕೆಲವು ತಿಂಗಳುಗಳಿಂದ ಉಭಯ ಪಕ್ಷಗಳ ಪರ ವಕೀಲರು ಸುದೀರ್ಘ ವಾದ-ಪ್ರತಿವಾದಗಳನ್ನು ಮಂಡಿಸಿದ್ದರು. ವಾದ ಪ್ರತಿವಾದಗಳ ನಂತರ ದೂರಿನಲ್ಲಿ ಸೂಕ್ತ ಆಧಾರಗಳಿಲ್ಲದ ಕಾರಣ ಪ್ರಕರಣವನ್ನು ವಜಾಗೊಳಿಸಲಾಗಿದೆ.



