ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಜೋಡಿಯ ‘ಜೈಲರ್ 2’ ಚಿತ್ರವು ಚಿತ್ರಮಂದಿರಗಳಲ್ಲಿ ಸುನಾಮಿ ಎಬ್ಬಿಸಿದೆ. ಬಿಡುಗಡೆಯಾದ ಕೇವಲ 11 ದಿನಗಳಲ್ಲಿ ಭರ್ಜರಿ ಗಳಿಕೆ ಕಾಣುವ ಮೂಲಕ ತಮಿಳು ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಐತಿಹಾಸಿಕ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. ಭಾನುವಾರ ಒಂದೇ ದಿನ ಜಾಗತಿಕವಾಗಿ 44 ಕೋಟಿಗೂ ಹೆಚ್ಚು ಹಣ ಬಾಚುವ ಮೂಲಕ 800 ಮತ್ತು 900 ಕೋಟಿ ಮೈಲಿಗಲ್ಲುಗಳತ್ತ ಮುನ್ನುಗ್ಗುತ್ತಿದೆ.
11ನೇ ದಿನವಾದ ಭಾನುವಾರ ಭಾರತದಲ್ಲಿ ಈ ಸಿನಿಮಾ 25.70 ಕೋಟಿ ಗಳಿಕೆ ಕಂಡಿದೆ. ಇದರೊಂದಿಗೆ ದೇಶೀಯವಾಗಿ ಚಿತ್ರದ ಒಟ್ಟು ಗಳಿಕೆ 398 ಕೋಟಿ ತಲುಪಿದೆ. ಶೀಘ್ರದಲ್ಲೇ ಭಾರತದಲ್ಲೇ 400 ಕೋಟಿ ಗಳಿಸಿದ ‘ಜೈಲರ್ 1’ ಹಾಗೂ ವಿಜಯ್ ಅವರ ‘ಲಿಯೋ’ ಸಾಲಿಗೆ ಇದು ಸೇರ್ಪಡೆಯಾಗಲಿದೆ.
ಭಾರತದಲ್ಲಷ್ಟೇ ಅಲ್ಲದೆ, ವಿದೇಶಗಳಲ್ಲೂ ‘ಜೈಲರ್ 2’ ಅಧಿಪತ್ಯ ಸಾಧಿಸಿದೆ. 11 ದಿನಗಳಲ್ಲಿ ವಿದೇಶದಿಂದ ಸುಮಾರು 243.50 ಕೋಟಿ ಗಳಿಸಿದ್ದು, ಚಿತ್ರದ ಜಾಗತಿಕ ಒಟ್ಟು ಗಳಿಕೆ ಬರೋಬ್ಬರಿ 710 ಕೋಟಿಗೆ ತಲುಪಿದೆ.
ಈ ಹಿಂದೆ ಶಂಕರ್ ನಿರ್ದೇಶನದ ‘2.0’ ಸಿನಿಮಾ ಗಳಿಸಿದ್ದ 691 ಕೋಟಿ ದಾಖಲೆಯನ್ನು ‘ಜೈಲರ್ 2’ ಹಿಂದಿಕ್ಕಿದೆ. ಜೊತೆಗೆ ತನ್ನದೇ ಮೊದಲ ಭಾಗ (604 ಕೋಟಿ) ಹಾಗೂ ‘ಲಿಯೋ’ (605 ಕೋಟಿ) ಚಿತ್ರಗಳ ಸಾಧನೆಯನ್ನು ಮೀರಿ ನಿಂತಿದೆ. 700 ಕೋಟಿ ಗಡಿ ದಾಟಿದ ಮೊದಲ ತಮಿಳು ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಜೈಲರ್ 2’, ಭಾರತದಾದ್ಯಂತ ಈ ಸಾಧನೆ ಮಾಡಿದ 18ನೇ ಸಿನಿಮಾ ಹಾಗೂ ದಕ್ಷಿಣ ಭಾರತದ 7ನೇ ಚಿತ್ರವಾಗಿದೆ.



