October 26, 2026
Monday, October 26, 2026
spot_img

Be Aware | ನಿಮಗೂ ರಾತ್ರಿ ನಿದ್ದೆಯಲ್ಲಿ ಹಲ್ಲು ಕಡಿಯುವ ಅಭ್ಯಾಸವಿದೆಯೇ? ಹಾಗಾದರೆ ಅಪಾಯ ಕಟ್ಟಿಟ್ಟಬುತ್ತಿ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸುಮಾರು 8 ರಿಂದ 10 ಪ್ರತಿಶತ ಜನರ ರಾತ್ರಿಯ ನಿದ್ದೆ ಹೇಗೆ ಸಾಗುತ್ತದೆ ಗೊತ್ತೇ? ಹಗಲಿನ ದಣಿವು ನೀಗಿಸಿಕೊಳ್ಳಲು ಮಲಗುವ ಇವರಿಗೆ, ನಿದ್ದೆಯಲ್ಲಿ ಬೇರೆಯದ್ದೇ ಒಂದು ಯುದ್ಧ ನಡೆಯುತ್ತಿರುತ್ತದೆ, ಅದೇ ‘ಸ್ಲೀಪ್ ಬ್ರಕ್ಸಿಸಮ್’ (Sleep Bruxism) ಅಂದರೆ ನಿದ್ದೆಯಲ್ಲಿ ಹಲ್ಲುಗಳನ್ನು ಗಟ್ಟಿಯಾಗಿ ಕಡಿಯುವುದು ಅಥವಾ ಪರಸ್ಪರ ಉಜ್ಜಿಕೊಳ್ಳುವುದು. ಅಚ್ಚರಿಯೆಂದರೆ, ಈ ಸಮಸ್ಯೆ ಇರುವ ಬಹುತೇಕರಿಗೆ ತಾವೇ ಹೀಗೆ ಮಾಡುತ್ತಿದ್ದೇವೆಂಬ ಕಲ್ಪನೆಯೂ ಇರುವುದಿಲ್ಲ.

ಏನಿದು ‘ಸ್ಲೀಪ್ ಬ್ರಕ್ಸಿಸಮ್’?

ಸಾಮಾನ್ಯವಾಗಿ ನಾವು ಹಗಲಿನಲ್ಲಿ ಒತ್ತಡದಲ್ಲಿದ್ದಾಗ ಹಲ್ಲು ಕಚ್ಚುವುದುಂಟು. ಆದರೆ, ನಿದ್ರೆಯಲ್ಲಿ ನಮ್ಮ ಪ್ರಜ್ಞೆ ತಪ್ಪಿದಾಗ ಬಾಯಿಯ ದವಡೆಗಳು ತಾವಾಗಿಯೇ ಬಿಗಿಯಾಗಿ ಹಲ್ಲುಗಳು ಪರಸ್ಪರ ಉಜ್ಜಿಕೊಳ್ಳುತ್ತವೆ. ಈ ಸಮಸ್ಯೆಯಿಂದ ಬಳಲುವ ಶೇಕಡಾ 90 ರಷ್ಟು ಜನರಿಗೆ ತಾವೇ ರಾತ್ರಿ ಹಲ್ಲು ಕಡಿಯುತ್ತಿದ್ದೇವೆ ಎಂಬ ಬಗ್ಗೆ ಸುಳಿವೂ ಇರುವುದಿಲ್ಲ. ಪಕ್ಕದಲ್ಲಿ ಮಲಗುವವರು ಹಲ್ಲು ಕಡಿಯುವ ಶಬ್ದ ಕೇಳಿ ಎಚ್ಚರಿಸಿದಾಗಷ್ಟೇ ಈ ಸತ್ಯ ಹೊರಬರುತ್ತದೆ.

ಬೆಳಗಾಗುವ ಹೊತ್ತಿಗೆ ವಿಚಿತ್ರ ಸುಸ್ತು

ನಿಮಗೆ ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ತಲೆನೋವು, ದವಡೆ ನೋವು ಅಥವಾ ಕಿವಿ ನೋವು ಕಾಡುತ್ತದೆಯೇ? ಹಲ್ಲುಗಳ ನಡುವೆ ವಿಚಿತ್ರ ಬಿಗಿತ ಅಥವಾ ಬಾಯಿ ತೆರೆಯಲು ಕಷ್ಟವಾಗುತ್ತಿದೆಯೇ? ಇದು ಬ್ರೂಕ್ಸಿಸಮ್‌ನ ಸ್ಪಷ್ಟ ಲಕ್ಷಣಗಳು. ರಾತ್ರಿಯೆಲ್ಲಾ ಹಲ್ಲುಗಳನ್ನು ಕಡಿಯುವುದರಿಂದ ಮುಖದ ಸ್ನಾಯುಗಳಿಗೆ ಅತಿಯಾದ ಆಯಾಸವಾಗಿ, ಇಡೀ ದಿನ ದೇಹವು ಸೋತು ಹೋದಂತೆನಿಸುತ್ತದೆ.

ಆರೋಗ್ಯಕ್ಕೆ ದೊಡ್ಡ ಪೆಟ್ಟು

ಹಲ್ಲು ಕಡಿಯುವುದನ್ನು ಕೇವಲ ಸಣ್ಣ ಶಬ್ದವೆಂದು ನಿರ್ಲಕ್ಷಿಸಿದರೆ ಮುಂದೆ ದೊಡ್ಡ ಬೆಲೆ ತೆರಬೇಕಾಗುತ್ತದೆ. ನಿರಂತರವಾಗಿ ಹೀಗೆ ಮಾಡುವುದರಿಂದ ಹಲ್ಲುಗಳ ಮೇಲಿನ ಗಟ್ಟಿಯಾದ ಲೇಪನ ಸವೆದುಹೋಗುತ್ತದೆ. ಇದರಿಂದ ಹಲ್ಲುಗಳು ಸಣ್ಣಗಾಗುವುದು, ಮುರಿಯುವುದು ಅಥವಾ ಬಿಸಿ-ತಣ್ಣಗಿನ ಪದಾರ್ಥಗಳಿಗೆ ಸಡಿಲಗೊಳ್ಳುವ ಸಮಸ್ಯೆ ಎದುರಾಗುತ್ತದೆ. ಅಲ್ಲದೆ, ದವಡೆಯ ಕೀಲುಗಳಿಗೆ ತೊಂದರೆಯಾಗಿ ಬಾಯಿ ತೆರೆಯಲು ಕಷ್ಟವಾಗಬಹುದು ಮತ್ತು ಮುಖದ ಸೌಂದರ್ಯ ಹಾಗೂ ನಗುವಿನ ಅಂದವೂ ಕೆಡಬಹುದು.

ಈ ಸಮಸ್ಯೆಯಿಂದ ಹೊರಬರುವುದು ಹೇಗೆ?

ದಂತ ವೈದ್ಯರ ಸಲಹೆ ಪಡೆದು ರಾತ್ರಿ ಮಲಗುವಾಗ ಹಲ್ಲುಗಳಿಗೆ ರಕ್ಷಣೆ ನೀಡುವ ‘ನೈಟ್ ಗಾರ್ಡ್’ ಧರಿಸಬಹುದು. ಇದು ಹಲ್ಲುಗಳು ಕಡಿಯುವುದನ್ನು ತಡೆಯುತ್ತದೆ.

ಮಲಗುವ ಮುನ್ನ ಧ್ಯಾನ, ಯೋಗ ಅಥವಾ ಹಿತವಾದ ಸಂಗೀತ ಕೇಳುವುದು ಮನಸ್ಸನ್ನು ಶಾಂತಗೊಳಿಸುತ್ತದೆ.

ರಾತ್ರಿ ವೇಳೆ ಕಾಫಿ, ಚಹಾ ಅಥವಾ ಆಲ್ಕೋಹಾಲ್ ಸೇವನೆಯನ್ನು ಕಡಿಮೆ ಮಾಡುವುದು ನಿದ್ರೆಯಲ್ಲಿ ಹಲ್ಲು ಕಡಿಯುವುದನ್ನು ತಡೆಯಲು ಸಹಕಾರಿ.

ರಾತ್ರಿಯ ನಿದ್ದೆ ನಮಗೆ ನೆಮ್ಮದಿ ನೀಡಬೇಕೇ ಹೊರತು ಹಲ್ಲುಗಳಿಗೆ ಹಿಂಸೆಯಾಗಬಾರದು. ಬೆಳಗಿನ ದವಡೆ ನೋವನ್ನು ಕಡೆಗಣಿಸದೆ, ಇಂದೇ ಎಚ್ಚೆತ್ತುಕೊಂಡು ಆರೋಗ್ಯಕರ ನಿದ್ದೆಯನ್ನು ಮಾಡಿ.

Must Read

Skip to toolbar