October 26, 2026
Monday, October 26, 2026
spot_img

Beauty Care | ಮುಖದ ಕಾಂತಿ ಮಂಕಾಗಿದೆಯೇ? ಆಯ್ಲಿ ಸ್ಕಿನ್‌, ಮೊಡವೆಗೆ ಇಲ್ಲಿದೆ 5 ಸಿಂಪಲ್ ಡಯಟ್ ಟಿಪ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಿನವಿಡೀ ಮುಖ ಎಣ್ಣೆಯುಕ್ತವಾಗಿ ಕಾಣಿಸಿಕೊಳ್ಳುವುದು, ಬಿಸಿಲಿಗೆ ಹೋದರೇ ಸಾಕು ಮುಖ ಕಾಂತಿ ಕಳೆದುಕೊಂಡು ಡಲ್ ಆಗುವುದು ಮತ್ತು ಪದೇ ಪದೇ ಮೊಡವೆಗಳು ಕಾಡುವುದು ಇಂದಿನ ದಿನಗಳಲ್ಲಿ ಅನೇಕರನ್ನು ಕಾಡುವ ಸಾಮಾನ್ಯ ಸಮಸ್ಯೆ. ದುಬಾರಿ ಕ್ರೀಮ್‌ಗಳು ಮತ್ತು ಫೇಸ್‌ವಾಶ್ ಗಳನ್ನು ಬಳಸಿ ಸುಸ್ತಾಗಿದ್ದೀರಾ? ಹಾಗಾದರೆ ನಿಮ್ಮ ಅಡುಗೆ ಮನೆಯಲ್ಲೇ ಇರುವ ಆಹಾರದ ಕಡೆ ಒಮ್ಮೆ ಗಮನಹರಿಸಿ. ನಾವು ತಿನ್ನುವ ಆಹಾರವೇ ನಿಮ್ಮ ತ್ವಚೆಯ ಆರೋಗ್ಯವನ್ನು ನಿರ್ಧರಿಸುತ್ತದೆ.

ದೇಹಕ್ಕೆ ಬೇಕು ಹೈಡ್ರೇಶನ್

ದಿನಕ್ಕೆ ಕನಿಷ್ಠ 7 ರಿಂದ 8 ಗ್ಲಾಸ್ ನೀರು ಕುಡಿಯುವುದನ್ನು ರೂಢಿಸಿಕೊಳ್ಳಿ. ನೀರು ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಲು ಮತ್ತು ತ್ವಚೆಗೆ ತೇವಾಂಶ ಒದಗಿಸಲು ಪ್ರಮುಖ ಪಾತ್ರ ವಹಿಸುತ್ತದೆ. ನೀರು ಕಡಿಮೆ ಕುಡಿದರೆ ತ್ವಚೆ ಒಣಗಿ ಸುಕ್ಕುಗಟ್ಟಬಹುದು ಅಥವಾ ಎಣ್ಣೆ ಉತ್ಪತ್ತಿ ಹೆಚ್ಚಾಗಬಹುದು.

ತರಕಾರಿ, ಹಣ್ಣು ತಿನ್ನಿ

ನಿಮ್ಮ ತಟ್ಟೆಯಲ್ಲಿ ಹಸಿರು ಸೊಪ್ಪು, ಹಣ್ಣುಗಳು ಮತ್ತು ತರಕಾರಿಗಳು ಹೆಚ್ಚಿರಲಿ. ಇವುಗಳಲ್ಲಿರುವ ವಿಟಮಿನ್ ಎ, ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳು ತ್ವಚೆಯ ಜೀವಕೋಶಗಳನ್ನು ಪುನಶ್ಚೇತನಗೊಳಿಸುತ್ತವೆ. ಇದು ಮುಖದ ಮಂದತ್ವವನ್ನು ಹೋಗಲಾಡಿಸಿ, ನೈಸರ್ಗಿಕ ಕಾಂತಿಯನ್ನು ಮರಳಿ ತರುತ್ತದೆ.

ಶುಗರ್, ಜಂಕ್ ಫುಡ್‌ಗೆ ಗುಡ್ ಬೈ ಹೇಳಿ

ಬರ್ಗರ್, ಪಿಜ್ಜಾ, ಹಾಗೂ ಅತಿ ಹೆಚ್ಚು ಸಕ್ಕರೆ ಇರುವ ಪದಾರ್ಥಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಿ, ಚರ್ಮದಲ್ಲಿ ಎಣ್ಣೆಯ ಗ್ರಂಥಿಗಳ ಉತ್ಪತ್ತಿಯನ್ನು ಉತ್ತೇಜಿಸುತ್ತವೆ. ಇದು ನೇರವಾಗಿ ಮೊಡವೆಗಳಿಗೆ ದಾರಿ ಮಾಡಿಕೊಡುತ್ತದೆ. ಸಂಸ್ಕರಿಸಿದ ಆಹಾರಗಳನ್ನು ಕಡಿಮೆ ಮಾಡಿ, ಆರೋಗ್ಯಕರ ಸ್ನ್ಯಾಕ್ಸ್ ಆಯ್ಕೆ ಮಾಡಿ.

ಒಮೆಗಾ-3 ಶಕ್ತಿ

ಮೀನು, ಅಗಸೆ ಬೀಜಗಳು, ವಾಲ್‌ನಟ್ಸ್ ಮತ್ತು ಚಿಯಾ ಸೀಡ್ಸ್ ನಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಇವು ಚರ್ಮದಲ್ಲಿ ಉರಿಯೂತವನ್ನು ಕಡಿಮೆ ಮಾಡಿ, ಮೊಡವೆಗಳ ಸಮಸ್ಯೆಯನ್ನು ತಡೆಯಲು ಸಹಾಯ ಮಾಡುತ್ತವೆ. ಜೊತೆಗೆ ತ್ವಚೆಯನ್ನು ಮೃದುವಾಗಿಡುತ್ತವೆ.

ಪ್ರೊಬೈಯೋಟಿಕ್ಸ್, ಡೈರಿ ಉತ್ಪನ್ನಗಳ ಮಿತಿ

ಮೊಸರು ಮತ್ತು ಮಜ್ಜಿಗೆಯಂತಹ ಪ್ರೊಬೈಯೋಟಿಕ್ ಆಹಾರಗಳು ಜೀರ್ಣಕ್ರಿಯೆಯನ್ನು ಸುಧಾರಿಸಿ ತ್ವಚೆಯನ್ನು ಆರೋಗ್ಯವಾಗಿಡುತ್ತವೆ. ಆದರೆ ಕೆಲವು ವ್ಯಕ್ತಿಗಳಲ್ಲಿ ಹಾಲು ಮತ್ತು ಡೈರಿ ಉತ್ಪನ್ನಗಳು ಮೊಡವೆಗಳನ್ನು ಹೆಚ್ಚಿಸಬಹುದು. ನಿಮ್ಮ ದೇಹಕ್ಕೆ ಯಾವುದು ಸೂಕ್ತ ಎಂಬುದನ್ನು ಗಮನಿಸಿ ಡೈರಿ ಉತ್ಪನ್ನಗಳನ್ನು ಸೇವಿಸಿ.

ಸೌಂದರ್ಯ ಎನ್ನುವುದು ಮೇಲ್ಮೈಯ ಅಲಂಕಾರವಲ್ಲ, ಅದು ಒಳಗಿನ ಆರೋಗ್ಯದ ಪ್ರತಿಬಿಂಬ. ಇದರ ಜೊತೆಗೆ ಸಾಕಷ್ಟು ನಿದ್ರೆ ಮಾಡುವುದು ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಆರೋಗ್ಯಕರ ಚರ್ಮದ ರಹಸ್ಯವಾಗಿದೆ. ಇಂದಿನಿಂದಲೇ ನಿಮ್ಮ ಆಹಾರಶೈಲಿಯಲ್ಲಿ ಈ ಬದಲಾವಣೆಗಳನ್ನು ಮಾಡಿ, ಮಿನುಗುವ ಮತ್ತು ಆರೋಗ್ಯಕರ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಿ.

Must Read

Skip to toolbar