October 27, 2026
Tuesday, October 27, 2026
spot_img

ಅನಾರೋಗ್ಯದ ನಾಟಕವಾಡಿ ಪೊಲೀಸರ ಮೇಲೇ ಅಟ್ಯಾಕ್: ಜೈಲಿನಿಂದ 17 ಮಂದಿ ಕೈದಿಗಳು ಎಸ್ಕೇಪ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತಮಿಳುನಾಡಿನ ಥೇಣಿ ಜಿಲ್ಲೆಯ ತೆಕ್ಕಂಪಟ್ಟಿ ಉಪ ಜೈಲಿನಲ್ಲಿ ಭದ್ರತಾ ಲೋಪವೊಂದು ಸಂಭವಿಸಿದೆ. ಸೋಮವಾರ ರಾತ್ರಿ ಜೈಲಿನ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿ ಬರೋಬ್ಬರಿ 17 ಕೈದಿಗಳು ಜೈಲಿನಿಂದ ಪರಾರಿಯಾಗಿದ್ದಾರೆ.

ಈ ಘಟನೆ ಇಡೀ ರಾಜ್ಯಾದ್ಯಂತ ತಲ್ಲಣ ಸೃಷ್ಟಿಸಿದ್ದು, ಪರಾರಿಯಾದ ಕೈದಿಗಳ ಪತ್ತೆಗಾಗಿ ಪೊಲೀಸರು ಬೃಹತ್ ಜಾಲ ಬೀಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಇವರಲ್ಲಿ ನಾಲ್ವರು ಕೈದಿಗಳನ್ನು ಪೊಲೀಸರು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಅನಾರೋಗ್ಯದ ನಾಟಕವಾಡಿ ಸಿಬ್ಬಂದಿ ಮೇಲೆ ಅಟ್ಯಾಕ್

ಆಂಡಿಪಟ್ಟಿ ಸಮೀಪದ ತೆಕ್ಕಂಪಟ್ಟಿಯಲ್ಲಿರುವ ಈ ಉಪ ಜೈಲಿನಲ್ಲಿ ಒಂದೇ ಸೆಲ್‌ನಲ್ಲಿದ್ದ ಕೈದಿಗಳೆಲ್ಲರೂ ಸೇರಿ ಈ ದುಷ್ಕೃತ್ಯ ಎಸಗಿದ್ದಾರೆ. ಜೈಲಿನಲ್ಲಿರುವ ತಮ್ಮ ಸಹ ಕೈದಿಯೊಬ್ಬನಿಗೆ ತೀವ್ರ ಅನಾರೋಗ್ಯ ಕಾಡಿದೆ ಎಂದು ಕೈದಿಗಳು ಜೋರಾಗಿ ಕೂಗಾಡಿ ನಾಟಕವಾಡಿದ್ದಾರೆ. ಇದನ್ನು ನಂಬಿದ ಜೈಲು ಸಿಬ್ಬಂದಿ ಸೆಲ್‌ನ ಒಳಗೆ ತಪಾಸಣೆಗೆ ಹೋಗುತ್ತಿದ್ದಂತೆ, ಒಟ್ಟಿಗೆ ಮುಗಿಬಿದ್ದ ಕೈದಿಗಳು ಸಿಬ್ಬಂದಿ ಮೇಲೆ ಭೀಕರವಾಗಿ ಹಲ್ಲೆ ನಡೆಸಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಈ ದಾಳಿಯಲ್ಲಿ ಜೈಲು ಸಿಬ್ಬಂದಿಯಾದ ತಂಗಪಾಂಡಿ ಎಂಬ ಗ್ರೇಡ್-2 ಪೊಲೀಸ್ ಅಧಿಕಾರಿಯ ತಲೆಗೆ ತೀವ್ರ ಪೆಟ್ಟಾಗಿದ್ದು,. ಅವರನ್ನು ತಕ್ಷಣ ಜಿ.ವಿಳಕ್ಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರ ಜೊತೆಗೆ ಇನ್ನುಳಿದ ಇಬ್ಬರು ಜೈಲು ಸಿಬ್ಬಂದಿಗೂ ಸಣ್ಣಪುಟ್ಟ ಗಾಯಗಳಾಗಿವೆ.

ತೀವ್ರಗೊಂಡ ಶೋಧ ಕಾರ್ಯ

ಘಟನೆ ತಿಳಿಯುತ್ತಿದ್ದಂತೆ ಎಚ್ಚೆತ್ತ ತಮಿಳುನಾಡು ಪೊಲೀಸರು ಇಡೀ ಭಾಗವನ್ನು ಹೈ ಅಲರ್ಟ್ ಮಾಡಿದ್ದಾರೆ. ದಕ್ಷಿಣ ವಲಯದ ಐಜಿಪಿ ವಿಜಯೇಂದ್ರ ಬಿದರಿ ನೇತೃತ್ವದಲ್ಲಿ ಕೈದಿಗಳ ಪತ್ತೆಗೆ 17 ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ನೆರೆಯ ಮಧುರೈ, ದಿಂಡಿಗಲ್ ಹಾಗೂ ಕೇರಳ ಗಡಿಯ ಇಡುಕ್ಕಿ ಜಿಲ್ಲೆಗಳಿಗೂ ಮಾಹಿತಿ ರವಾನಿಸಲಾಗಿದೆ.

ದಿಂಡಿಗಲ್ ಜಿಲ್ಲೆಯ ಎಸ್‌ಪಿ ಎಸ್.ಜಯಕುಮಾರ್ ಮಾತನಾಡಿ, ದಿಂಡಿಗಲ್-ಥೇಣಿ ಹೆದ್ದಾರಿ ಸೇರಿದಂತೆ ಪ್ರಮುಖ 16 ಕಡೆಗಳಲ್ಲಿ ತಕ್ಷಣವೇ ಪೊಲೀಸ್ ಚೆಕ್‌ಪೋಸ್ಟ್‌ಗಳನ್ನು ಹಾಕಿ ಪ್ರತಿಯೊಂದು ವಾಹನವನ್ನು ತಪಾಸಣೆ ಮಾಡಲಾಗುತ್ತಿದೆ. ಸಾರ್ವಜನಿಕರ ಸಹಾಯಕ್ಕಾಗಿ ಪರಾರಿಯಾದ 17 ಕೈದಿಗಳ ಫೋಟೋಗಳನ್ನು ಎಲ್ಲೆಡೆ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ:

ಸಿಎಂ ವಿಜಯ್ ರಾಜೀನಾಮೆಗೆ ಡಿಎಂಕೆ ಸಂಸದರ ಒತ್ತಾಯ

ಈ ಜೈಲ್ ಬ್ರೇಕ್ ಘಟನೆಯು ತಮಿಳುನಾಡು ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಆರೋಪಿಸಿರುವ ಡಿಎಂಕೆ ರಾಜ್ಯಸಭಾ ಸಂಸದ ಪಿ.ವಿಲ್ಸನ್, ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಕಳೆದ ಒಂದೇ ವಾರದಲ್ಲಿ ಹೈ-ಸೆಕ್ಯುರಿಟಿ ಇರುವ ಪುಳಲ್ ಜೈಲಿನಲ್ಲೂ ಇಂತಹದ್ದೇ ಘಟನೆ ನಡೆದಿರುವುದನ್ನು ನೆನಪಿಸಿರುವ ಅವರು, ಸಿಎಂ ನೈತಿಕ ಹೊಣೆ ಹೊತ್ತು ಅಧಿಕಾರದಿಂದ ಕೆಳಗಿಳಿಯಬೇಕು ಎಂದು ‘X’ ನಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

Must Read

Skip to toolbar