October 27, 2026
Tuesday, October 27, 2026
spot_img

ಸಾವಿರಾರು ಜನರ ಎದುರು ಸಿಆರ್‌ಪಿಎಫ್‌ ಯೋಧನಿಗೆ ಅವಮಾನ : ʼಏಯ್‌ ಇಳಿಯೋ ಕೆಳಗೆʼ ಎಂದ ಸಂಸದ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯೊಂದರಲ್ಲಿ ಸಿಆರ್‌ಪಿಎಫ್‌ ಯೋಧರೊಬ್ಬರಿಗೆ ಅವಮಾನ ಮಾಡಲಾಗಿದೆ. ಸಂಸದನೋರ್ವ ಸ್ಟೇಜ್‌ ಮೇಲೆ ನಿಂತಿದ್ದ ಯೋಧನಿಗೆ ಏಯ್‌ ಇಳಿಯೋ ಕೆಳಗೆ ಎಂದು ಏಕವಚನದಲ್ಲಿ ಮಾತನಾಡಿಸಿ ಕೆಳಕ್ಕೆ ದಬ್ಬಿದ್ದಾರೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಸಂಸದನ ನಡೆಗೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಹಾರದ ಮಧೇಪುರಾ ಜಿಲ್ಲೆಯಲ್ಲಿ ನಡೆದ ಖುರ್ಡಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಹೊಸ ವಿವಾದವೊಂದು ಸೃಷ್ಟಿಯಾಗಿದೆ.

ಪೂರ್ಣಿಯಾದ ಪಕ್ಷೇತರ ಸಂಸದ ಪಪ್ಪು ಯಾದವ್ ಅವರು ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿಯನ್ನು ತಳ್ಳಿ ವೇದಿಕೆಯಿಂದ ಕೆಳಗಿಳಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಈ ಘಟನೆಗೆ ಸಂಬಂಧಿಸಿದಂತೆ ಸಂಸದರ ವರ್ತನೆಯ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.

ವರದಿಗಳ ಪ್ರಕಾರ, ಸಂಸದರ ಭದ್ರತೆಗೆ ನಿಯೋಜಿಸಲಾಗಿದ್ದ ಈ ಸಿಬ್ಬಂದಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌) ಅಥವಾ ಬಿಹಾರ ವಿಶೇಷ ಸಶಸ್ತ್ರ ಪೊಲೀಸ್ ಪಡೆಯ (ಬಿಎಸ್‌ಎಪಿ) ಸದಸ್ಯರಾಗಿರಬಹುದು ಎಂದು ಹೇಳಲಾಗಿದೆ. ಆದರೆ, ಸಿಬ್ಬಂದಿಯ ನಿಖರ ಗುರುತು ದೃಢಪಟ್ಟಿಲ್ಲ. ಪಪ್ಪು ಯಾದವ್‌ ಅವರ ತವರು ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಇದ್ದರು. ಈ ವೇಳೆ ಭದ್ರತಾ ಸಿಬ್ಬಂದಿ ಸಂಸದರ ರಕ್ಷಣೆಯ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ವೇದಿಕೆಯಲ್ಲಿದ್ದ ಭದ್ರತಾ ಸಿಬ್ಬಂದಿಯನ್ನು ಕಂಡು ಪಪ್ಪು ಯಾದವ್ ಅಸಮಾಧಾನಗೊಂಡಿದ್ದು, ಬಳಿಕ ಸಂಪೂರ್ಣ ಸಮವಸ್ತ್ರದಲ್ಲಿದ್ದ ಸಿಬ್ಬಂದಿಯನ್ನು ಕೈಯಿಂದ ತಳ್ಳಿ ವೇದಿಕೆಯಿಂದ ಕೆಳಗಿಳಿಯುವಂತೆ ಮಾಡಿದ್ದಾರೆ. ಈ ದೃಶ್ಯವನ್ನು ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಲವರು ತಮ್ಮ ಮೊಬೈಲ್‌ ಫೋನ್‌ಗಳಲ್ಲಿ ಸೆರೆಹಿಡಿದಿದ್ದಾರೆ.

Must Read