ಹೊಸದಿಗಂತ ವರದಿ ಗೋಕರ್ಣ:
ಮೀನುಗಾರಿಕೆ ಮುಗಿಸಿ ಬಂದಿದ್ದ ಬೋಟ್‌ನಿಂದ ಮೀನು ಇಳಿಸಿದ ಬಳಿಕ ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿದ್ದ ಮೂವರು ಕಾರ್ಮಿಕರು ಮೃತಪಟ್ಟಿದ್ದು, ಮತ್ತೊಬ್ಬರು ಪ್ರಾಣಾಪಾಯದಿಂದ ಪಾರಾಗಿರುವ ದಾರುಣ ಘಟನೆ ಮಂಗಳವಾರ ಸಂಜೆ ತದಡಿ ಬಂದರಿನಲ್ಲಿ ನಡೆದಿದೆ.
ಮೀನಿನ ಕೊಳೆತ ತ್ಯಾಜ್ಯದಿಂದ ಉಂಟಾದ ತೀವ್ರ ವಾಸನೆಯಿಂದ ಕಾರ್ಮಿಕರು ಅಸ್ವಸ್ಥರಾಗಿರಬಹುದು ಎಂದು ಶಂಕಿಸಲಾಗಿದೆ.
ಸ್ವಚ್ಛತೆಗೆ ಇಳಿದ ಕಾರ್ಮಿಕರಿಗೆ ಏಕಾಏಕಿ ಅಸ್ವಸ್ಥತೆ
ಕುಮಟಾ ತಾಲೂಕಿನ ಒನ್ನಳ್ಳಿಯ ‘ಖುಜೈನಾ’ ಬೋಟ್‌ನಲ್ಲಿ ಮಂಗಳವಾರ ಮೀನು ಇಳಿಸಿದ ಬಳಿಕ ಕಾರ್ಮಿಕರು ತ್ಯಾಜ್ಯ ತೆರವುಗೊಳಿಸಲು ಮುಂದಾಗಿದ್ದರು. ಈ ವೇಳೆ ಚಮನ್ ಜಾತಿಯ ಮೀನಿನ ಕೊಳೆತ ತ್ಯಾಜ್ಯದಿಂದ ಬಂದ ತೀವ್ರ ದುರ್ವಾಸನೆಯಿಂದ ಕಾರ್ಮಿಕರು ಪ್ರಜ್ಞೆ ತಪ್ಪಿ ಕೋಲ್ಡ್ ಸ್ಟೋರೇಜ್‌ನ ಸಣ್ಣ ಹೊಂಡಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ. ಒಬ್ಬರನ್ನು ರಕ್ಷಿಸಲು ಮತ್ತೊಬ್ಬರು ಮುಂದಾದಾಗ ಒಟ್ಟು ನಾಲ್ವರು ಅಸ್ವಸ್ಥಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ತಕ್ಷಣ ಖಾಸಗಿ ಆಂಬ್ಯುಲೆನ್ಸ್ ಮೂಲಕ ನಾಲ್ವರನ್ನು ತದಡಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೂವರು ಮೃತಪಟ್ಟಿದ್ದರು. ಆಡಳಿತ ವೈದ್ಯಾಧಿಕಾರಿ ಡಾ. ಜಗದೀಶ ನಾಯ್ಕ ಹಾಗೂ ಸಿಬ್ಬಂದಿ ತುರ್ತು ಚಿಕಿತ್ಸೆ ನೀಡಿ ಮತ್ತೊಬ್ಬ ಕಾರ್ಮಿಕನ ಜೀವ ಉಳಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕುಮಟಾಕ್ಕೆ ಕಳುಹಿಸಲಾಗಿದೆ.
ಮೃತರ ಕುಟುಂಬದಲ್ಲಿ ಮುಗಿಲು ಮುಟ್ಟಿದ ಆಕ್ರಂದನ
ಮೃತರನ್ನು ಕುಮಟಾ ಕಾಗಾಲದ ನೌಶಾದ್ ಅಲಿರಾಜನ್ (35), ಒನ್ನಳ್ಳಿಯ ಅಮನ್ ಅಯೂಬ್ ಲಿಂಗಾಡೂ (18) ಹಾಗೂ ಅಮೀರ್ ಅಬ್ದುಲ್ ಉಂಚಳ್ಳಿ (20) ಎಂದು ಗುರುತಿಸಲಾಗಿದೆ. ಬೆಟ್ಕುಳಿಯ ಅಬ್ದುಲ್ (55) ಪ್ರಾಣಾಪಾಯದಿಂದ ಪಾರಾದ ಕಾರ್ಮಿಕರಾಗಿದ್ದಾರೆ.
ಮೃತರು ಕುಟುಂಬಕ್ಕೆ ಆಧಾರವಾಗಿದ್ದ ಯುವಕರಾಗಿದ್ದರಿಂದ ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಧಾವಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಪೊಲೀಸರು ಹಾಗೂ ಸ್ಥಳೀಯರು ಕುಟುಂಬದವರಿಗೆ ಸಾಂತ್ವನ ಹೇಳಲು ಪ್ರಯತ್ನಿಸಿದರು.
ಇದನ್ನೂ ಓದಿ:
ಕಾರಣದ ಬಗ್ಗೆ ತನಿಖೆ
ಪಿ.ಐ. ಶ್ರೀಧರ್ ಎಸ್.ಆರ್., ಪಿಎಸ್‌ಐ ಅನಿಲ್ ಹಾಗೂ ಸಿಬ್ಬಂದಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿಯಲು ಮೃತದೇಹಗಳನ್ನು ಕಾರವಾರ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಲು ಸಿದ್ಧತೆ ಕೈಗೊಳ್ಳಲಾಗಿದೆ. ಕೊಳೆತ ಮೀನಿನ ತ್ಯಾಜ್ಯದಿಂದ ಹೊರಬಂದ ಅನಿಲ ಅಥವಾ ತೀವ್ರ ದುರ್ವಾಸನೆ ಘಟನೆಗೆ ಕಾರಣವಾಗಿದೆಯೇ ಎಂಬುದು ತನಿಖೆಯಿಂದ ಸ್ಪಷ್ಟವಾಗಬೇಕಿದೆ.



