ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೀವನವೆಂಬ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಸ್ಪರ್ಧಾ ಮನೋಭಾವ ಅತ್ಯಗತ್ಯ. ಭವಿಷ್ಯದಲ್ಲಿ ಯುವಪೀಳಿಗೆ ತೀವ್ರ ಸ್ಪರ್ಧೆಯನ್ನು ಎದುರಿಸಬೇಕಿರುವುದರಿಂದ ಇಂದಿನಿಂದಲೇ ಅದಕ್ಕೆ ಸಿದ್ಧರಾಗಬೇಕು ಎಂದು ಹವ್ಯಕ ಮಹಾಸಭೆಯ ಅಧ್ಯಕ್ಷ ಡಾ. ಗಿರಿಧರ ಕಜೆ ಹೇಳಿದರು.

ನಗರದ ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ನಡೆದ ‘ಪ್ರತಿಬಿಂಬ’ ಸ್ಪರ್ಧಾ ಸೌರಭದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಇಂದಿನ ಮಕ್ಕಳು ಎಲೆಕ್ಟ್ರಾನಿಕ್ ಸಾಧನಗಳ ಬಳಕೆಗೆ ಹೆಚ್ಚು ಒಗ್ಗಿಕೊಳ್ಳುತ್ತಿರುವ ಸಂದರ್ಭದಲ್ಲಿ, ಅವುಗಳ ಆಕರ್ಷಣೆಯನ್ನು ಮೀರಿ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಮುಂದೆ ಬಂದಿರುವುದು ಆಶಾದಾಯಕ ಬೆಳವಣಿಗೆ ಎಂದು ಅವರು ಅಭಿಪ್ರಾಯಪಟ್ಟರು. ಮಕ್ಕಳಲ್ಲಿ ಆತ್ಮವಿಶ್ವಾಸ, ಪ್ರತಿಭೆ ಮತ್ತು ಸ್ಪರ್ಧಾ ಮನೋಭಾವ ಬೆಳೆಸಲು ಇಂತಹ ಕಾರ್ಯಕ್ರಮಗಳು ಅತ್ಯಂತ ಅಗತ್ಯ ಎಂದು ತಿಳಿಸಿದರು.
ಭಾರತದ ಯುವಜನಸಂಖ್ಯೆಯ ಮಹತ್ವವನ್ನು ವಿವರಿಸಿದ ಅವರು, ದೇಶದಲ್ಲಿ ಯುವಜನರ ಸಂಖ್ಯೆ ಹೆಚ್ಚಿರುವುದು ಅವಕಾಶಗಳ ಜೊತೆಗೆ ಸವಾಲುಗಳನ್ನೂ ಸೃಷ್ಟಿಸುತ್ತದೆ ಎಂದರು. ಕರ್ನಾಟಕದಲ್ಲಿ 15ರಿಂದ 29 ವರ್ಷದೊಳಗಿನ ಸುಮಾರು 2.1 ಕೋಟಿ ಜನರಿದ್ದಾರೆ. ಇಂದಿನ ಯುವಕರು ಶಿಕ್ಷಣ, ಉದ್ಯೋಗ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ತಮ್ಮ ಸಮವಯಸ್ಕರಿಂದ ಸ್ಪರ್ಧೆ ಎದುರಿಸುತ್ತಿದ್ದಾರೆ. ಮುಂದಿನ ಹತ್ತು ವರ್ಷಗಳಲ್ಲಿ ಈ ಸ್ಪರ್ಧೆ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಭವಿಷ್ಯವನ್ನು ಸುಲಭದ ಹಾದಿ ಎಂದು ಭಾವಿಸದೆ, ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಡಿ. 20ರಂದು ಬೃಹತ್ ಮಾತೃ ಸಂಗಮ
ಹವ್ಯಕ ಮಹಿಳಾ ವೇದಿಕೆಯ ಸಂಘಟನಾ ಕಾರ್ಯಚಟುವಟಿಕೆಗಳ ಕುರಿತು ಮಾತನಾಡಿದ ಡಾ. ಕಜೆ, ಮಹಿಳೆಯರನ್ನು ಸಂಘಟಿಸುವುದು ಸಮಗ್ರ ಸಮಾಜವನ್ನು ಒಗ್ಗೂಡಿಸಿದಂತೆ ಎಂದರು. ದೇಶ-ವಿದೇಶಗಳ 83 ವಿವಿಧ ಪ್ರಾಂತ್ಯಗಳಲ್ಲಿ ಹವ್ಯಕ ಮಹಿಳಾ ವೇದಿಕೆಗಳನ್ನು ರಚಿಸುವ ಕಾರ್ಯ ನಡೆಯುತ್ತಿದೆ. ಇದರ ಭಾಗವಾಗಿ ಡಿಸೆಂಬರ್ 20ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ‘ಮಾತೃ ಸಂಗಮ’ ಕಾರ್ಯಕ್ರಮ ಆಯೋಜಿಸಲಾಗುವುದು. ಮಹಿಳೆಯರ ಸಾಧನೆಗಳನ್ನು ಸಂಭ್ರಮಿಸುವ ಹಾಗೂ ಸ್ತ್ರೀಶಕ್ತಿಯನ್ನು ಗೌರವಿಸುವ ಈ ಕಾರ್ಯಕ್ರಮದಲ್ಲಿ ಹಲವು ವಿಶೇಷತೆಗಳು ಇರಲಿವೆ ಎಂದು ತಿಳಿಸಿದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವ ಡಾ. ರಾಮಕೃಷ್ಣ ಭಟ್ ಕೂಟೇಲು ಮಾತನಾಡಿ, ಬಿಂಬ-ಪ್ರತಿಬಿಂಬ ವಾದವು ಅದ್ವೈತ ವೇದಾಂತದ ಪ್ರಮುಖ ಸಿದ್ಧಾಂತಗಳಲ್ಲಿ ಒಂದಾಗಿದೆ. ಭಾರತೀಯ ತತ್ತ್ವಶಾಸ್ತ್ರದ ವಿಚಾರಗಳನ್ನು ಸ್ಮರಿಸುವುದರ ಜೊತೆಗೆ, ಜೀವನದಲ್ಲಿ ಎದುರಾಗುವ ಸ್ಪರ್ಧೆಗಳಿಗೆ ಸ್ಫೂರ್ತಿ ತುಂಬುವ ವೇದಿಕೆಯಾಗಿ ‘ಪ್ರತಿಬಿಂಬ’ ಕಾರ್ಯಕ್ರಮ ರೂಪುಗೊಂಡಿದೆ ಎಂದರು.

ಕರ್ನಾಟಕ ಹೈಕೋರ್ಟ್ನ ಹಿರಿಯ ನ್ಯಾಯವಾದಿ ವಿಘ್ನೇಶ್ವರ ಶಾಸ್ತ್ರಿ ಮಾತನಾಡಿ, ಹವ್ಯಕ ಮಹಾಸಭೆಯು ಸಮಾಜ ಸಂಘಟನೆ, ಸಂಸ್ಕಾರಗಳ ಸಂರಕ್ಷಣೆ ಮತ್ತು ಪರಂಪರೆಯ ಬೆಳವಣಿಗೆಗೆ ನಿರಂತರವಾಗಿ ಶ್ರಮಿಸುತ್ತಿದೆ. ಹಿರಿಯರ ಅನುಭವದ ಜೊತೆಗೆ ಯುವಜನರ ಉತ್ಸಾಹವೂ ಒಂದಾಗಿರುವುದು ಸಮಾಜದ ಭವಿಷ್ಯದ ಬಗ್ಗೆ ಭರವಸೆ ಮೂಡಿಸುತ್ತದೆ ಎಂದು ಹೇಳಿದರು.
ಪ್ರತಿಭಾವಂತ ಮಕ್ಕಳಿಗೆ ‘ಪಲ್ಲವ’ ಪುರಸ್ಕಾರ
ಕಾರ್ಯಕ್ರಮದಲ್ಲಿ ಬೆಂಗಳೂರಿನ 20 ಪ್ರಾಂತ್ಯಗಳ ಹವ್ಯಕ ಮಹಿಳಾ ವೇದಿಕೆಗಳನ್ನು ಉದ್ಘಾಟಿಸಲಾಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ‘ಪಲ್ಲವ’ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿವಿಧ ವಯೋಮಾನದ ವಿಭಾಗಗಳಲ್ಲಿ ನಡೆದ ಸಾಂಪ್ರದಾಯಿಕ ಸ್ಪರ್ಧೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ಹವ್ಯಕ ಮಹಾಸಭೆಯ ಉಪಾಧ್ಯಕ್ಷ ಶ್ರೀಧರ ಜೆ. ಭಟ್ಟ ಕೆಕ್ಕಾರು, ಪ್ರಧಾನ ಕಾರ್ಯದರ್ಶಿ ಸಿಎ ವೇಣುವಿಘ್ನೇಶ ಸಂಪ, ಕಾರ್ಯದರ್ಶಿಗಳಾದ ಪ್ರಶಾಂತ ಭಟ್ ಮಲವಳ್ಳಿ ಮತ್ತು ಆದಿತ್ಯ ಹೆಗಡೆ ಕಲಗಾರು, ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್ ಯಲಹಂಕ ಸೇರಿದಂತೆ ಮಹಾಸಭೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.



