ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಲ್ಲಿ ಈಗಾಗಲೇ ತನ್ನ ಪ್ರಭಾವ ಬೀರಿರುವ ಹಿಂಗಾರು ಮಳೆಯು ಅಕ್ಟೋಬರ್ ಅಂತ್ಯದವರೆಗೂ ಮುಂದುವರಿಯಲಿದೆ. ಹವಾಮಾನ ವೈಪರೀತ್ಯ ಹಾಗೂ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಮಳೆಯ ವಾತಾವರಣ ನಿರ್ಮಾಣವಾಗಿದ್ದು, ಮುಂದಿನ 5 ದಿನಗಳ ಕಾಲ ಸತತವಾಗಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕೃತ ಮುನ್ಸೂಚನೆ ನೀಡಿದೆ.
ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಹಿಂಗಾರು ಮಳೆ ಇನ್ನಷ್ಟು ಚುರುಕುಗೊಂಡಿದೆ. ದಕ್ಷಿಣ ಮತ್ತು ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ.
ಸಿಲಿಕಾನ್ ಸಿಟಿಯಲ್ಲಿ ದಿನವಿಡೀ ಮೋಡ ಕವಿದ ಮುಸುಕಿನ ವಾತಾವರಣ ಇರಲಿದ್ದು, ಅಲ್ಲಲ್ಲಿ ಹಗುರವಾದ ತುಂತುರು ಮಳೆಯಾಗಲಿದೆ. ನಗರದಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆಯಿದೆ.
ಗಿರಿಧಾಮ ಮಡಿಕೇರಿಯಲ್ಲಿ ತಣ್ಣನೆಯ ಗಾಳಿ ಮತ್ತು ಸಣ್ಣ ಮಳೆಯ ವಾತಾವರಣ ಇರಲಿದೆ. ಇಲ್ಲಿ ಗರಿಷ್ಠ 27 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದ್ದು, ನಗರದಲ್ಲಿ ಮುಂಜಾನೆ ವೇಳೆ ಮಂಜು ಮುಸುಕಿದ ವಾತಾವರಣ ಕಂಡುಬರಲಿದೆ.
ಹವಾಮಾನ ದಿಢೀರ್ ಬದಲಾಗುತ್ತಿದ್ದು, ರಾತ್ರಿ ಹಾಗೂ ಮುಂಜಾನೆಯ ವೇಳೆ ಚಳಿಯ ಪ್ರಭಾವ ಹೆಚ್ಚಾಗಲಿದೆ. ಸಾರ್ವಜನಿಕರು ಹೊರಗೆ ಹೋಗುವಾಗ ಕೊಡೆ ಅಥವಾ ರೇನ್‌ಕೋಟ್ ಜೊತೆಯಲ್ಲಿಟ್ಟುಕೊಳ್ಳುವುದು ಒಳಿತು.



