ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಕೇವಲ 27 ಎಸೆತಗಳಲ್ಲಿ ಶತಕ ಸಿಡಿಸಿ ಜಾಗತಿಕ ದಾಖಲೆ ಬರೆದ ಬ್ಯಾಟರ್ ಎಂದರೆ ತಕ್ಷಣಕ್ಕೆ ನೆನಪಾಗುವುದು ಸಾಹಿಲ್ ಚೌಹಾಣ್. 2024ರಲ್ಲಿ ಸೈಪ್ರಸ್ ವಿರುದ್ಧ ಸಾಹಿಲ್ ಬರೆದ ಈ ಬೃಹತ್ ವಿಶ್ವ ದಾಖಲೆಯನ್ನು ಧೂಳೀಪಟ ಮಾಡುವ ಸುವರ್ಣ ಅವಕಾಶ ಇತ್ತೀಚೆಗೆ ಭಾರತದ ಯುವ ಬ್ಯಾಟರ್ ಅಭಿಷೇಕ್ ಶರ್ಮಾ ಮುಂದಿತ್ತು. ಆದರೆ, ಇನಿಂಗ್ಸ್ ಮಧ್ಯೆ ಆಡಿದ 7 ಡಾಟ್ ಬಾಲ್ಗಳು ಈ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸುವ ಅವಕಾಶವನ್ನು ಅವರಿಂದ ಕಿತ್ತುಕೊಂಡಿದೆ.
ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ ಎಡಗೈ ಓಪನರ್ ಅಭಿಷೇಕ್ ಶರ್ಮಾ ಕೇವಲ 35 ಎಸೆತಗಳಲ್ಲಿ ಶತಕ ಪೂರೈಸಿ ಅಬ್ಬರಿಸಿದರು. ಆದರೆ, ಈ ಇನಿಂಗ್ಸ್ ನಡುವೆ ಅವರು 7 ಎಸೆತಗಳಲ್ಲಿ ಯಾವುದೇ ರನ್ ಗಳಿಸದೆ ಡಾಟ್ ಬಾಲ್ ಆಡಿದ್ದರು. ಶತಕದ ಹತ್ತಿರ ಬಂದಾಗ ಅವರು ತೋರಿದ ಆಟ ಸಾರ್ವಕಾಲಿಕ ದಾಖಲೆಯನ್ನು ಕೈತಪ್ಪಿಸಿತು. ಒಂದು ವೇಳೆ ಈ 7 ಎಸೆತಗಳಲ್ಲೂ ರನ್ ಅಥವಾ ಬೌಂಡರಿ ಬಂದಿದ್ದರೆ, ಅವರು ಕೇವಲ 26 ಅಥವಾ 27 ಎಸೆತಗಳಲ್ಲೇ ಸೆಂಚುರಿ ಪೂರೈಸಿ ಜಾಗತಿಕ ಕ್ರಿಕೆಟ್ ಇತಿಹಾಸದ ಅತ್ಯಂತ ವೇಗದ ಶತಕದ ಒಡೆಯ ಎನಿಸಿಕೊಳ್ಳುತ್ತಿದ್ದರು.
ವಿಶ್ವ ದಾಖಲೆ ಕೈತಪ್ಪಿದರೂ, ಐಸಿಸಿಯ ಪೂರ್ಣ ಸದಸ್ಯತ್ವ ಹೊಂದಿರುವ ಬಲಿಷ್ಠ ದೇಶಗಳ ಪೈಕಿ ಟಿ20 ಕ್ರಿಕೆಟ್ನಲ್ಲಿ ಅತೀ ವೇಗದ ಶತಕ ಸಿಡಿಸಿದ ವಿಶ್ವ ದಾಖಲೆ ಈಗಲೂ ಅಭಿಷೇಕ್ ಶರ್ಮಾ ಹೆಸರಿನಲ್ಲೇ ಭದ್ರವಾಗಿದೆ. ಅವರು 2026ರಲ್ಲಿ ಅಫ್ಘಾನಿಸ್ತಾನ್ ವಿರುದ್ಧ ಕೇವಲ 30 ಎಸೆತಗಳಲ್ಲಿ ಶತಕ ಪೂರೈಸಿ ಈ ಸಾಧನೆ ಮಾಡಿದ್ದರು.
ಈ ಪಂದ್ಯದಲ್ಲಿ ಸಾರ್ವಕಾಲಿಕ ಜಾಗತಿಕ ದಾಖಲೆ ಮಿಸ್ ಆದರೂ, ಅಭಿಷೇಕ್ ಶರ್ಮಾ ಅಪರೂಪದ ಹೊಸ ವಿಶ್ವ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ 40ಕ್ಕಿಂತ ಕಡಿಮೆ ಎಸೆತಗಳಲ್ಲಿ 3 ಬಾರಿ ಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.



