ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ಪುನೀತ್ ಇಂದು ಬೆಂಗಳೂರಿನ 59ನೇ ಸಿಸಿಹೆಚ್ ಕೋರ್ಟ್‌ನಲ್ಲಿ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ.
ಈ ಮುಂಚೆ ನ್ಯಾಯಾಧೀಶರ ಮುಂದೆ ಸಿಆರ್‌ಪಿಸಿ 164ರ ಅಡಿಯಲ್ಲಿ ನೀಡಿದ್ದ ಹೇಳಿಕೆಯಿಂದ ಪುನೀತ್ ಸಂಪೂರ್ಣವಾಗಿ ಉಲ್ಟಾ ಹೊಡೆದಿದ್ದಾರೆ. ಈ ಮೊದಲು ಪವಿತ್ರಾ ಗೌಡ ಹಾಗೂ ದರ್ಶನ್ ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿಯ ಮೇಲೆ ಯಾವ ರೀತಿಯ ದೌರ್ಜನ್ಯ ಎಸಗಿದ್ದರು ಎಂದು ಹೇಳಿದ್ದ ಪುನೀತ್, ಇದೀಗ ದರ್ಶನ್ ಹಾಗೂ ಪವಿತ್ರಾ ಶೆಡ್ ಬಳಿ ಬಂದಿದ್ದನ್ನು ತಾವು ನೋಡಿಯೇ ಇಲ್ಲ ಎಂದು ಹೇಳಿದ್ದಾರೆ.
ಹಿಂದಿನ ಹೇಳಿಕೆಗೆ ವಿರುದ್ಧವಾಗಿ ನಡೆದುಕೊಂಡ ಕಾರಣ ಕೋರ್ಟ್ ಪುನೀತ್ ಸಾಕ್ಷಿಯನ್ನು ಪ್ರತಿಕೂಲ ಎಂದು ಪರಿಗಣಿಸಿದೆ. ಸಾಕ್ಷಿಯ ಭಾಗಶಃ ಹೇಳಿಕೆಯನ್ನು ಮಾತ್ರ ನ್ಯಾಯಾಲಯ ದಾಖಲಿಸಿಕೊಂಡಿದ್ದು, ನಾಳೆಗೆ ವಿಚಾರಣೆಯನ್ನು ಮುಂದೂಡಿದೆ. ಪುನೀತ್ ಡಿ ಕಂಪನಿ ಫ್ಯಾನ್ ಪೇಜ್‌ನ ಅಡ್ಮಿನ್ ಆಗಿದ್ದ. ನಟ ದರ್ಶನ್ ಜೊತೆ ಒಡನಾಟ ಇಟ್ಟುಕೊಂಡಿದ್ದ. ಈತ ಪ್ರಕರಣದ ಪ್ರತ್ಯಕ್ಷ ಸಾಕ್ಷಿ ಆಗಿದ್ದ. ಈತ ವಿಚಾರಣೆಗೆ ಗೈರಾದ ಕಾರಣ ಆತನ ವಿರುದ್ಧ ಸಮನ್ಸ್ ಜಾರಿ ಮಾಡಿ, ಬಂಧನದ ವಾರೆಂಟ್ ಹೊರಡಿಸಲಾಗಿತ್ತು. ಈಗ ಆತ ವಿಚಾರಣೆಗೆ ಹಾಜರಾಗಿ ಭಿನ್ನ ಹೇಳಿಕೆ ನೀಡಿದ್ದಾನೆ.



