October 28, 2026
Wednesday, October 28, 2026
spot_img

ಹಿಂದಕ್ಕೆ ಹೆಜ್ಜೆ ಏಕೆ? ಮುನ್ನಡೆಯುವುದೇ ಜೀವನ! ಬಾಡಿ ಶೇಮಿಂಗ್ ಬಗ್ಗೆ ಕತ್ರಿನಾ ಖಡಕ್ ಉತ್ತರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಕ್ಕಳ ಜನನದ ನಂತರ ಮಹಿಳೆಯರ ಶರೀರದಲ್ಲಾಗುವ ಬದಲಾವಣೆಗಳು ನೈಸರ್ಗಿಕ. ಆದರೆ, ಗ್ಲಾಮರ್ ಜಗತ್ತಿನಲ್ಲಿರುವ ಮಹಿಳೆಯರಿಗೆ ಈ ನೈಸರ್ಗಿಕ ಬದಲಾವಣೆಯೂ ಸವಾಲಾಗಿ ಪರಿಣಮಿಸುತ್ತದೆ. ಇತ್ತೀಚೆಗೆ ಅಂಬಾನಿ ಕುಟುಂಬದ ಗಣೇಶ ಚತುರ್ಥಿ ಆಚರಣೆಯಲ್ಲಿ ಪತಿ ವಿಕ್ಕಿ ಕೌಶಲ್ ಜೊತೆ ಕಾಣಿಸಿಕೊಂಡ ನಟಿ ಕತ್ರಿನಾ ಕೈಫ್, ತಮ್ಮ ಹೆರಿಗೆಯ ನಂತರದ ದೇಹದ ಆಕಾರದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಕಟು ಟೀಕೆಗೆ ಒಳಗಾಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಉಂಟಾದ ಈ ಬಾಡಿ ಶೇಮಿಂಗ್‌ಗೆ ನಟಿ ಈಗ ಅತ್ಯಂತ ಪ್ರಬುದ್ಧವಾಗಿ ಉತ್ತರಿಸಿದ್ದಾರೆ.

ಅಂಬಾನಿ ಅವರ ಕಾರ್ಯಕ್ರಮದ ಫೋಟೋಗಳು ಹೊರಬಿದ್ದ ತಕ್ಷಣ, ಇಂಟರ್ನೆಟ್‌ನಲ್ಲಿ ಕತ್ರಿನಾ ಅವರ ಹಳೆಯ ಮತ್ತು ಹೊಸ ಫೋಟೋಗಳನ್ನು ಹೋಲಿಸಿ ‘ಬಿಫೋರ್ ಅಂಡ್ ಆಫ್ಟರ್’ ಕೊಲಾಜ್‌ಗಳನ್ನು ಹಂಚಿಕೊಳ್ಳಲಾಯಿತು. ಆದರೆ, ಈ ಟೀಕೆಗಳಿಗೆ ಸೋಷಿಯಲ್ ಮೀಡಿಯಾದಲ್ಲಿದ್ದ ಅನೇಕ ಮಹಿಳೆಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಕತ್ರಿನಾ ಪರವಾಗಿ ಧ್ವನಿ ಎತ್ತಿದರು. ಪ್ರಸವದ ನಂತರ ಮಹಿಳೆಯರ ದೇಹದಲ್ಲಾಗುವ ಬದಲಾವಣೆಗಳನ್ನು ಗೌರವಿಸುವುದನ್ನು ಕಲಿಯಿರಿ ಎಂದು ನೆಟ್ಟಿಗರಿಗೆ ಬುದ್ಧಿ ಹೇಳಿದರು.

ತಮ್ಮ ವಿರುದ್ಧದ ಟೀಕೆಗಳಿಗೆ ಸಂದರ್ಶನದಲ್ಲಿ ಉತ್ತರಿಸಿದ ಕತ್ರಿನಾ, “ಜನರ ಅಭಿಪ್ರಾಯಗಳು ಸದಾ ಬದಲಾಗುತ್ತಿರುತ್ತವೆ. ಪ್ರಸವದ ನಂತರ ಮಹಿಳೆಯ ದೇಹ ಏನನ್ನು ಅನುಭವಿಸುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೂ ಕೆಲವರು ಕೆಟ್ಟ ಕಣ್ಣಿನಿಂದ ನೋಡಿದರೆ, ಅದು ಅವರ ವ್ಯಕ್ತಿಗತ ಆಯ್ಕೆ. ಇದನ್ನ ಮಾಹಿತಿ ಕೊರತೆ ಎಂದು ಹೇಳಲು ಸಾಧ್ಯವಿಲ್ಲ” ಎಂದಿದ್ದಾರೆ.

‘ಬೌನ್ಸ್ ಬ್ಯಾಕ್’ ಎಂಬ ಪರಿಕಲ್ಪನೆಯನ್ನೇ ಪ್ರಶ್ನಿಸಿದ ಅವರು, “ಬೌನ್ಸ್ ಬ್ಯಾಕ್? ಎಲ್ಲಿಂದ? ನನ್ನ ಮನಸ್ಸಿನಾಳದ ದೊಡ್ಡ ಕನಸಾಗಿದ್ದ ತಾಯ್ತನದ ಕಡೆಗೆ ನಾನು ಒಂದು ಹೆಜ್ಜೆ ಮುಂದೆ ಇಟ್ಟಿದ್ದೇನೆ. ಹಾಗಿರುವಾಗ ನಾನು ಮತ್ತೆ ಹಿಂದಕ್ಕೆ ಏಕೆ ಹೋಗಲಿ? ನನ್ನ ಮಗ ವಿಹಾನ್ ಮುಖ ನೋಡಿದಾಗ ಸಿಕ್ಕ ಸಂತೋಷಕ್ಕೆ ಯಾವುದೇ ಸಾಟಿಯಿಲ್ಲ. ನನ್ನ ಆರೋಗ್ಯ ಮತ್ತು ಫಿಟ್‌ನೆಸ್ ಪಯಣ ನನ್ನದೇ ಆದ ವೇಗದಲ್ಲಿ ಸಾಗಲಿದೆ” ಎಂದು ಖಡಕ್ ಆಗಿ ಹೇಳಿದ್ದಾರೆ.

ಕತ್ರಿನಾ ಅವರ ಈ ಮಾತುಗಳು ಕೇವಲ ಟ್ರೋಲರ್‌ಗಳಿಗೆ ನೀಡಿರುವ ಉತ್ತರ ಮಾತ್ರವಲ್ಲ, ಸಮಾಜದಲ್ಲಿ ಮಹಿಳೆಯರ ಮೇಲಿರುವ ಅನಗತ್ಯ ಸೌಂದರ್ಯದ ಒತ್ತಡಗಳಿಗೆ ನೀಡಿದ ಪ್ರಬಲ ಚಾಟಿ ಏಟಾಗಿದೆ.

Must Read

Skip to toolbar