ಹೊಸದಿಗಂತ ವರದಿ ಮಡಿಕೇರಿ:
ಆಸ್ತಿ ವೈಷಮ್ಯದಿಂದ ಸೋದರನನ್ನೇ ಗುಂಡಿಕ್ಕಿ ಕೊಲೆ ಮಾಡಿದ ಆರೋಪ ಸಾಕ್ಷ್ಯಾಧಾರಗಳಿಂದ ದೃಢಪಟ್ಟ ಹಿನ್ನೆಲೆಯಲ್ಲಿ ಇಲ್ಲಿನಬ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 1.20ಲಕ್ಷ ರೂ.ದಂಡ ವಿಧಿಸಿ ತೀರ್ಪು ನೀಡಿದೆ.
ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಗಾಳಿಬೀಡು ಗ್ರಾಮದ ವಣಚಲು ಎಂಬಲ್ಲಿ ವಾಸವಿರುವ ಪೂವಮ್ಮ ಎಂಬವರ ಪತಿ ಲೋಕನಾಥ್ ಮೃತಪಟ್ಟ ಬಳಿಕ ಅವರ ಮೈದುನ ಅಪ್ಪಣ್ಣರವರು ಪೂವಮ್ಮರವರೊಂದಿಗೆ ಅವರ ಮನೆಯಲ್ಲಿ ಪೂವಮ್ಮರ ಇಬ್ಬರು ಹೆಣ್ಣು ಮಕ್ಕಳಿಗೆ ನೆರವಾಗಲು ಅವರ ಜೊತೆಯಲ್ಲಿ ವಾಸವಿದ್ದು, ಅವರ ಕಾಫಿ ತೋಟವನ್ನು ಒಟ್ಟಾಗಿ ಕೃಷಿ ಮಾಡಿಕೊಂಡಿದ್ದರೆನ್ನಲಾಗಿದೆ.
ನಂತರ ಲೋಕನಾಥ್ರವರ ಇನ್ನೊಬ್ಬ ತಮ್ಮ ಮಾಚಯ್ಯನೂ ವಣಚಲುವಿಗೆ ಬಂದು ಪೂವಮ್ಮರವರ ಮನೆಯ ಪಕ್ಕದ ಕೊಟ್ಟಿಗೆಯಲ್ಲಿ ವಾಸವಾಗಿದ್ದು, ಪೂವಮ್ಮರವರ ಮನೆಯಲ್ಲಿ ಊಟ ಮಾಡಿಕೊಂಡು ಕೆಲಸ ಮಾಡಿಕೊಂಡಿದ್ದನೆಂದು ಹೇಳಲಾಗಿದೆ.
ಈ ನಡುವೆ ಪೂವಮ್ಮರವರು ಆಸ್ತಿಯನ್ನು ತಮ್ಮ ಮಕ್ಕಳಾದ ರಶ್ಮಿಕಾ ಮತ್ತು ರಕ್ಷಿತಾರವರಿಗೆ ನೀಡಲು ನಿರ್ಧರಿಸಿದ್ದರೆನ್ನಲಾಗಿದ್ದು ಇದು ಅಪ್ಪಣ್ಣ ಹಾಗೂ ಮಾಚಯ್ಯ ನಡುವೆ ವೈಮನಸ್ಸಿಗೆ ಕಾರಣವಾಗಿತ್ತು. ಇದೇ ವಿಚಾರವಾಗಿ 2024ರ ಡಿ.16ರಂದು ಬೆಳಗ್ಗೆ ಮನೆಯ ಅಂಗಳದಲ್ಲಿ ಮಾಚಯ್ಯ ಹಾಗೂ ಅಪ್ಪಣ್ಣರವರ ನಡುವೆ ಜಗಳವಾಗಿದ್ದು, ಈ ಸಂದರ್ಭ ಕೋಪಗೊಂಡ ಆರೋಪಿ ಮಾಚಯ್ಯ, ತಾನು ವಾಸವಿದ್ದ ಲೈನ್ ಮನೆಯಲ್ಲಿ ಮೊದಲೇ ತಂದಿರಿಸಿಕೊಂಡಿದ್ದ ಅಪ್ಪಣ್ಣರವರಿಗೆ ಸೇರಿದ ಬಂದೂಕಿನಿಂದ ಅಪ್ಪಣ್ಣರವರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾಗಿ ಹೇಳಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಮಡಿಕೇರಿ ಗ್ರಾಮಾಂತರ ಪೊಲೀಸ್ ನಿರೀಕ್ಷಕರಾಗಿದ್ದ ಹೆಚ್.ವಿ.ಚಂದ್ರಶೇಖರ್ ಅವರು ತನಿಖೆ ಕೈಗೊಂಡು, ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಮಡಿಕೇರಿಯ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಮಮ್ತಾಜ್ ಅವರು, ಆರೋಪಿ ಮಾಚಯ್ಯನಿಗೆ ಅಪ್ಪಣ್ಣರವರನ್ನು ಕೊಲೆ ಮಾಡಿರುವ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ಹಾಗೂ 1.20ಲಕ್ಷ ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ ಮೃತ ಅಪ್ಪಣ್ಣನವರ ವಾರಸುದಾರರಿಗೆ ಕಾನೂನು ಸೇವೆಗಳ ಪ್ರಾಧಿಕಾರ ಸೂಕ್ತ ಪರಿಹಾರವನ್ನು ನಿರ್ಧರಿಸುವಂತೆ ಆದೇಶಿಸಿದ್ದಾರೆ.
ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರ ಸರ್ಕಾರಿ ಅಭಿಯೋಜಕರಾದ ದೇವೇಂದ್ರ ಎನ್.ಪಿ. ಅವರು ವಾದ ಮಂಡಿಸಿದ್ದರು.



