October 28, 2026
Wednesday, October 28, 2026
spot_img

ನಾಲ್ಕು ಪರಿಷತ್ ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲುವು: ಕಾಂಗ್ರೆಸ್ ವಿರುದ್ಧ ಟೆಂಗಿನಕಾಯಿ ವಾಗ್ದಾಳಿ

ಹೊಸದಿಗಂತ ವರದಿ ಹುಬ್ಬಳ್ಳಿ:

ರಾಜ್ಯದಲ್ಲಿ ಇತ್ತೀಚಿನ ವಿದ್ಯಮಾನಗಳಾದ ಕಾಂಗ್ರೆಸ್ ನಾಯಕರ ಅಽಕಾರದಾಸೆ, ಭ್ರಷ್ಟಾಚಾರ, ಮತಗಳ್ಳತನ ಹಾಗೂ ಎಸ್‌ಐಆರ್ ಬಗ್ಗೆ ಅಪಪ್ರಚಾರ ಮಾಡುತ್ತಿರುವುದನ್ನು ಗಮನಿಸಿದ ಪ್ರಜ್ಞಾನವಂತ ಮತದಾರರು ನಾಲ್ಕು ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ತಿರಸ್ಕರಿಸಿ ಬಿಜೆಪಿ ಗೆಲ್ಲಿಸಿದ್ದಾರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಚುನಾವಣೆ ನಡೆದರೂ ಆಡಳಿತ ಪಕ್ಷ ಗೆಲ್ಲುವುದು ಸಾಮಾನ್ಯ. ಆದರೆ ರಾಜ್ಯದ ಕಾಂಗ್ರೆಸ್ ಪಕ್ಷದ ದುರಾಡಳಿತಕ್ಕೆ ಬೇಸತ್ತು ಮತದಾರರು ಎನ್‌ಡಿಎಗೆ ಅಭೂತ ಪೂರ್ವ ಗೆಲವು ತಂದು ಕೊಟ್ಟಿದ್ದಾರೆ ಎಂದರು.

ಜಾತಿ, ಮತ, ಪಂಥವನ್ನು ಬಿಟ್ಟು ದೇಶ ಅಭಿವೃದ್ಧಿ ಪಡಿಸುತ್ತಿರುವ ಪ್ರಧಾನಿ ಮೋದಿ ಅವರ ನೇತೃತ್ವಕ್ಕೆ ಮೆಚ್ಚಿದ್ದಾರೆ. ಕಾಂಗ್ರೆಸ್ ಚುನಾವಣೆಯಲ್ಲಿ ಗೆಲ್ಲಲು ಹಣ ಹಂಚಿಕೆ, ಸಮಾಜದಲ್ಲಿ ಕಲುಷಿತ ವಾತಾವರಣ ನಿರ್ಮಾಣ ಮಾಡಿತ್ತು. ಪಶ್ಚಿಮ ಪದವೀಧರರ ಕ್ಷೇತ್ರದ ವ್ಯಾಪ್ತಿಯಲ್ಲಿ 17 ಜನ ಕಾಂಗ್ರೆಸ್ ಶಾಸಕರಿದ್ದರು ಏನು ಪ್ರಯೋಜವಾಗಿಲ್ಲ. ಬಿಜೆಪಿ ಸಂಘಟನೆಯ ಮುಂದೆ ಎಲ್ಲವೂ ಶ್ಯೂನ್ಯವಾಗಿದೆ ಎಂದು ತಿಳಿಸಿದರು.
ಹಿಂದಿನಿಂದಲೂ ಇವಿಎಂ ಬಗ್ಗೆ ಆರೋಪ ಮಾಡುತ್ತಿದ್ದ ಕಾಂಗ್ರೆಸ್ ನಾಯಕರು ಬ್ಯಾಲೇಟ್ ಪೇಪರ್ ಮೂಲಕ ನಡೆದ ಚುನಾವಣೆಯಲ್ಲಿ ಸೋತಿದ್ದಾರೆ. ಇದರ ಅರ್ಥ ರಾಜ್ಯದ ಜನರಿಗೆ ಕಾಂಗ್ರೆಸ್ ಬೇಡವಾಗಿದೆ ಎಂದು ದೂರಿದರು.

ಕಾಂಗ್ರೆಸ್‌ಗೆ ಮತಗಳ್ಳತನ ರಕ್ತಗತವಾಗಿ ಬಂದಿದೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಅಭಿವೃದ್ಧಿ ಕುಂಠಿತವಾಗಿದೆ. ಇನ್ನಾದರೂ ರಾಜ್ಯ ಸರ್ಕಾರ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಬೇಕು. ಬಿಜೆಪಿ ನಾಲ್ಕು ವಿಧಾನ ಸಭಾ ಕ್ಷೇತ್ರದಲ್ಲಿ ಜಯಗಳಿಸಿರುವುದು, 2028 ರ ವಿಧಾನ ಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯ ದಿಕ್ಸೂಚಿಯಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜಿಲ್ಲೆಯಲ್ಲಿಯೂ ಕಾಂಗ್ರೆಸ್ ಸೋತಿದೆ. ಹಿಂದಿನ ಚುನಾವಣೆಯಲ್ಲಿ ನಾವೇ ಗೆಲ್ಲಿಸಿದ್ದೇವು ಎಂದು ಬೀಗಿದ್ದರು. ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರು ಈ ಬಾರಿ ಗೆಲವು ನಮ್ಮದೆ ಎಂದು ಹೇಳಿದ್ದರು. ಆದರೆ ಮತದಾರರು ಸ್ಪಷ್ಟ ಸಂದೇಶ ನೀಡಿದ್ದಾರೆ. ರಾಜಕಾರಣದಲ್ಲಿ ವ್ಯಕ್ತಿಗತ ನಿಂದನೆ ಸರಿಯಲ್ಲ. ಮಾತನಾಡುವಾಗ ಪ್ರಜ್ಞೆ ಬಹಳ ಅವಶ್ಯಕ ಎಂದು ಖರ್ಗೆ ಅವರಿಗೆ ಕುಟುಕಿದರು. ವಿಧಾನ ಪರಿಷತ್ ಸದಸ್ಯರಾದ ಲಿಂಗರಾಜ ಪಾಟೀಲ, ಪ್ರದೀಪ ಶೆಟ್ಟರ, ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಮಹೇಂದ್ರ ಕೌತಾಳ, ರಾಜು ಕೋರ್ಯಾಣಮಠ ಇದ್ದರು.

Must Read