October 29, 2026
Thursday, October 29, 2026
spot_img

ಆಡಿಯೋ ಬಾಂಬ್ ಬ್ಲಾಸ್ಟ್: ನಟ ಧನ್ವೀರ್ ವಿರುದ್ಧ ಎರಡೆರಡು ಎಫ್‌ಐಆರ್ ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್‌ವುಡ್ ನಟ ಧನ್ವೀರ್ ಗೌಡ ವಿರುದ್ಧ ಒಂದರ ಮೇಲೊಂದರಂತೆ ಕಾನೂನು ಕ್ರಮಗಳು ಜಾರಿಯಾಗುತ್ತಿದ್ದು, ಈ ಹಿಂದೆ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ನಾನ್-ಕಾಗ್ನಿಜಬಲ್ ರಿಪೋರ್ಟ್ ಪ್ರಕರಣಗಳು, ಇದೀಗ ಅಧಿಕೃತ ಎಫ್‌ಐಆರ್ ಆಗಿ ಮಾರ್ಪಟ್ಟಿವೆ. ನಟ ದರ್ಶನ್ ಅವರ ಆಪ್ತ ಬಳಗದಿಂದಲೇ ಈ ದೂರುಗಳು ದಾಖಲಾಗಿರುವುದು ಚಿತ್ರರಂಗದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ನಟ ದರ್ಶನ್ ಅವರ ಆಪ್ತ ಹಾಗೂ ಪಿಎ ನಾಗರಾಜು ಅವರು ಧನ್ವೀರ್ ವಿರುದ್ಧ ಆರ್.ಆರ್. ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಧನ್ವೀರ್ ತಮಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೆಟ್ಟ ಸಂದೇಶಗಳನ್ನು ಕಳುಹಿಸಿದ್ದಾರೆ ಹಾಗೂ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಈ ದೂರಿನ ಆಧಾರದ ಮೇಲೆ ಪೊಲೀಸರು ಇದೀಗ ಧನ್ವೀರ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ನಾಗರಾಜು ಅವರ ಆಪ್ತರಾದ ಭೋಜರಾಜು ಅವರು ನೀಡಿದ ದೂರಿನ ಮೇರೆಗೆ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲೂ ಧನ್ವೀರ್ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಧನ್ವೀರ್ ಬೆದರಿಕೆ ಹಾಕಿರುವ ಕಾಲ್ ರೆಕಾರ್ಡಿಂಗ್ ಗಳನ್ನು ಭೋಜರಾಜು ಪೊಲೀಸರಿಗೆ ಸಾಕ್ಷಿಯಾಗಿ ಒದಗಿಸಿದ್ದಾರೆ. ಇದನ್ನು ಪರಿಶೀಲಿಸಿದ ಪೊಲೀಸರು ಬಿಎನ್‌ಎಸ್ ಸೆಕ್ಷನ್ 351(2) ಮತ್ತು 352ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣದ ತೀವ್ರತೆಯನ್ನು ಪರಿಗಣಿಸಿ ಆರ್.ಆರ್. ನಗರ ಮತ್ತು ಬಸವೇಶ್ವರ ನಗರ ಪೊಲೀಸರು ಧನ್ವೀರ್ ಗೌಡ ಅವರಿಗೆ ನೋಟಿಸ್ ಜಾರಿಗೊಳಿಸಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಆಡಿಯೋ ಕ್ಲಿಪ್ ಗಳನ್ನು ಸಂಗ್ರಹಿಸಿರುವ ಪೊಲೀಸರು, ಪ್ರಮುಖವಾಗಿ ಪ್ರಸ್ತಾಪವಾಗಿರುವ ಹತ್ತು ಕೋಟಿ ರೂಪಾಯಿ ಹಣದ ವಹಿವಾಟು ಕುರಿತು ಸಮಗ್ರ ತನಿಖೆ ನಡೆಸಲು ಮುಂದಾಗಿದ್ದಾರೆ.

Must Read

Skip to toolbar