October 29, 2026
Thursday, October 29, 2026
spot_img

ಇಶಾನ್ ಕಿಶನ್ ಫುಲ್ ಫಿಟ್: ಕಿವೀಸ್ ವಿರುದ್ಧದ ಸಮರಕ್ಕೆ ಯಾರಿಗೆ ಸಿಗಲಿದೆ ಬುಲಾವ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನ್ಯೂಝಿಲೆಂಡ್ ವಿರುದ್ಧದ ನಾಲ್ಕನೇ ಟಿ20 ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಗೆ ದೊಡ್ಡ ಶಕ್ತಿ ಸಿಕ್ಕಂತಾಗಿದೆ. ಕಳೆದ ಎರಡು ಪಂದ್ಯಗಳಿಂದ ಗಾಯದ ಸಮಸ್ಯೆಯಿಂದಾಗಿ ಹೊರಗುಳಿದಿದ್ದ ಸ್ಫೋಟಕ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಈಗ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಆಕ್ಲೆಂಡ್‌ನ ಈಡನ್ ಪಾರ್ಕ್ ಮೈದಾನದಲ್ಲಿ ನಡೆದ ನೆಟ್ಸ್ ಅಭ್ಯಾಸದಲ್ಲಿ ಅವರು ಪೂರ್ಣ ಪ್ರಮಾಣದಲ್ಲಿ ಬ್ಯಾಟಿಂಗ್ ನಡೆಸಿ, ತಾವು ಮುಂದಿನ ಪಂದ್ಯಕ್ಕೆ ಸಿದ್ಧ ಎಂಬ ಸಂದೇಶ ರವಾನಿಸಿದ್ದಾರೆ. ಮೊದಲ ಪಂದ್ಯದಲ್ಲಿ ತೊಡೆಯ ಸ್ನಾಯು ಸೆಳೆತಕ್ಕೊಳಗಾಗಿದ್ದ ಇಶಾನ್, ಈಗ ಕಂಬ್ಯಾಕ್ ಮಾಡಲು ಕಾದು ಕುಳಿತಿದ್ದಾರೆ.

ಐದು ಪಂದ್ಯಗಳ ಈ ಸರಣಿಯಲ್ಲಿ ಭಾರತ ಈಗಾಗಲೇ 3-0 ಅಂತರದ ಐತಿಹಾಸಿಕ ಮುನ್ನಡೆ ಸಾಧಿಸಿ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಹೀಗಾಗಿ, ಯಾವುದೇ ರೀತಿಯ ತರಾತುರಿಯ ನಿರ್ಧಾರ ಕೈಗೊಳ್ಳದೆ, ಇಶಾನ್ ಕಿಶನ್‌ಗೆ ಮತ್ತಷ್ಟು ವಿಶ್ರಾಂತಿ ನೀಡಬೇಕೇ ಅಥವಾ ಪ್ಲೇಯಿಂಗ್ 11ಗೆ ಸೇರಿಸಿಕೊಳ್ಳಬೇಕೇ ಎಂಬ ಗೊಂದಲದಲ್ಲಿ ಮ್ಯಾನೇಜ್‌ಮೆಂಟ್ ಇದೆ.

ಒಂದು ವೇಳೆ ಇಶಾನ್ ಕಿಶನ್ ತಂಡಕ್ಕೆ ಮರಳಿದರೆ, ಆಡುವ ಬಳಗದಿಂದ ಯಾರನ್ನು ಕೈಬಿಡಬೇಕು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಮೂರನೇ ಟಿ20ಯಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಯುವ ತಾರೆ ವೈಭವ್ ಸೂರ್ಯವಂಶಿ ಕೇವಲ 19 ಎಸೆತಗಳಲ್ಲಿ 45 ರನ್ ಚಚ್ಚಿ ಅಭಿಷೇಕ್ ಶರ್ಮಾ ಜೊತೆ 133 ರನ್‌ಗಳ ಭರ್ಜರಿ ಜೊತೆಯಾಟವಾಡಿದ್ದರು. ಇಂತಹ ಫಾರ್ಮ್‌ನಲ್ಲಿರುವ ವೈಭವ್‌ರನ್ನ ಪಕ್ಕಕ್ಕಿಡುವುದು ಸುಲಭವಲ್ಲ. ಒಂದು ವೇಳೆ ವೈಭವ್‌ಗೆ ಓಪನಿಂಗ್ ನೀಡಿ, ಇಶಾನ್‌ರನ್ನ ಮಧ್ಯಮ ಕ್ರಮಾಂಕಕ್ಕೆ ತಂದರೆ, ಮೊದಲ ಪಂದ್ಯದ ಗೆಲುವಿನ ರೂವಾರಿ ಸಂಜು ಸ್ಯಾಮ್ಸನ್ ಜಾಗ ಅಪಾಯಕ್ಕೆ ಸಿಲುಕಲಿದೆ.

ಭಾರತ ಮತ್ತು ನ್ಯೂಝಿಲೆಂಡ್ ನಡುವಿನ 4ನೇ ಟಿ20 ಪಂದ್ಯವು ನಾಳೆ ಮಧ್ಯಾಹ್ನ 12:30ಕ್ಕೆ ಆರಂಭವಾಗಲಿದೆ. ಬೆಂಚ್ ಕಾಯುತ್ತಿರುವ ಹೊಸಬರಿಗೆ ಅವಕಾಶ ಸಿಗುತ್ತೋ ಅಥವಾ ಇಶಾನ್ ಕಿಶನ್ ಅಂಗಳಕ್ಕಿಳಿಯುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.

Must Read