ಹೊಸದಿಗಂತ ಡಿಜಿಟಲ್ ಡೆಸ್ಕ್:
ದಶಕಗಳಿಂದಲೂ ನ್ಯಾಯಾಲಯದ ಅಂಗಳದಲ್ಲಿದ್ದ 2011ರ ಸಾಲಿನ 362 ಕೆಎಎಸ್ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ಅತ್ಯಂತ ಮಹತ್ವದ ತೀರ್ಪು ನೀಡಿದೆ.
ಆಯ್ಕೆ ಪಟ್ಟಿಯನ್ನು ಬಲವಂತವಾಗಿ ಊರ್ಜಿತಗೊಳಿಸಲು 2022ರಲ್ಲಿ ಕರ್ನಾಟಕ ಸರ್ಕಾರ ಜಾರಿಗೆ ತಂದಿದ್ದ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ಸಂಪೂರ್ಣವಾಗಿ ರದ್ದುಗೊಳಿಸಿದೆ. ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ನೇತೃತ್ವದ ಪೀಠವು ಈ ಪ್ರಮುಖ ತೀರ್ಪನ್ನು ಪ್ರಕಟಿಸಿದ್ದು, ಪ್ರಸ್ತುತ ಸೇವೆಯಲ್ಲಿರುವ ಹಾಗೂ ನೇಮಕಾತಿ ಆದೇಶದ ನಿರೀಕ್ಷೆಯಲ್ಲಿದ್ದ 362 ಕೆಎಎಸ್ ಅಧಿಕಾರಿಗಳ ಭವಿಷ್ಯ ಮತ್ತೆ ಭಾರಿ ಅತಂತ್ರಕ್ಕೆ ಸಿಲುಕಿದೆ.
ಹೈಕೋರ್ಟ್ ಈಗಾಗಲೇ ಅಕ್ರಮಗಳ ಹಿನ್ನೆಲೆಯಲ್ಲಿ ರದ್ದುಗೊಳಿಸಿದ್ದ 362 ಹುದ್ದೆಗಳ ಆಯ್ಕೆ ಪಟ್ಟಿಗೆ ಜೀವ ತುಂಬಲು ರಾಜ್ಯ ಸರ್ಕಾರವು ವಿಧಾನಮಂಡಲದಲ್ಲಿ ಕರ್ನಾಟಕ ನಾಗರಿಕ ಸೇವೆಗಳು (ಆಯ್ಕೆಯ ಊರ್ಜಿತಗೊಳಿಸುವಿಕೆ ಮತ್ತು 2011ರ ಗೆಜೆಟೆಡ್ ಪ್ರೊಬೇಷನರಿಗಳ ನೇಮಕಾತಿ) ವಿಧೇಯಕ- 2022 ಅನ್ನು ತಂದು ಶಾಸನ ರೂಪಿಸಿತ್ತು. ನ್ಯಾಯಾಲಯದ ರದ್ದತಿಯನ್ನು ಮೀರಿ ಕಾಯ್ದೆ ರೂಪಿಸಿ ಆಯ್ಕೆ ಪಟ್ಟಿಯನ್ನು ಊರ್ಜಿತಗೊಳಿಸಲು ಹೊರಟ ಸರ್ಕಾರದ ಈ ಕ್ರಮ ಶಾಸನಬದ್ಧವಲ್ಲ ಮತ್ತು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಹಗರಣದ ಹಿನ್ನೆಲೆ ಏನು?
ನ. 3 2011ರಂದು ಕರ್ಕಾಟಕ ಲೋಕಸೇವಾ ಆಯೋಗವು 362 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಭರ್ತಿಗೆ ಅಧಿಕೃತ ಅರ್ಜಿ ಆಹ್ವಾನಿಸಿತ್ತು. ಈ ವೇಳೆ 2014 ಮಾರ್ಚ್-ಜೂನ್‌ನಲ್ಲಿ ಡಾ. ಎಚ್.ಪಿ.ಎಸ್. ಮೈತ್ರಿಯಾ ಅವರಿಂದ ನೇಮಕಾತಿಯಲ್ಲಿ ಕೋಟಿ ಕೋಟಿ ರೂಪಾಯಿ ಲಂಚ ಮತ್ತು ಅವ್ಯವಹಾರ ನಡೆದಿದೆ ಎಂದು ದೂರು ನೀಡಲಾಗಿತ್ತು. 2014ರ ಜೂನ್ 27ರಂದು ಸರ್ಕಾರದಿಂದ ಸಿಐಡಿ ತನಿಖೆಗೆ ಆದೇಶ ನೀಡಲಾಯಿತು. 2014 ಆಗಸ್ಟ್ 8ರಂದು ಸಿಐಡಿ ವರದಿ ಆಧಾರದ ಮೇಲೆ ಕಲುಷಿತಗೊಂಡಿದ್ದ ಇಡೀ 362 ಹುದ್ದೆಗಳ ಆಯ್ಕೆ ಪಟ್ಟಿಯನ್ನು ಹಿಂಪಡೆಯಲು ರಾಜ್ಯ ಸರ್ಕಾರ ತೀರ್ಮಾನಿಸಿತು.
2016ರಲ್ಲಿ ಕೆಎಟಿ ನೇಮಕಾತಿಗೆ ಆದೇಶಿಸಲಾಗಿತ್ತು, ಅದರೂ 2017 ಹಾಗೂ 2018ರ ಜುಲೈ 13ರಂದು ಹೈಕೋರ್ಟ್ ಲಿಖಿತ ಪರೀಕ್ಷೆ ಹಾಗೂ ಸಂದರ್ಶನದಲ್ಲಾದ ಅಕ್ರಮವನ್ನು ಎತ್ತಿಹಿಡಿದು 362 ಹುದ್ದೆಗಳ ನೇಮಕಾತಿಯನ್ನು ರದ್ದುಗೊಳಿಸಿ ತೀರ್ಪು ನೀಡಿತು. ಹೈಕೋರ್ಟ್ ಆದೇಶವನ್ನು ಬದಿಗೊತ್ತಿ, 362 KAS ಅಭ್ಯರ್ಥಿಗಳ ಆಯ್ಕೆಯನ್ನು ಬಲವಂತವಾಗಿ ಸಕ್ರಮಗೊಳಿಸಲು ‘ನೇಮಕಾತಿ ಊರ್ಜಿತಗೊಳಿಸುವಿಕೆ ಕಾಯ್ದೆ-2022’ ಅನ್ನು ಸರ್ಕಾರ ಜಾರಿಗೆ ತಂದಿತ್ತು.



