ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ನಟ ಪುನೀತ್ ರಾಜ್‌ಕುಮಾರ್ ಅವರ ಐದನೇ ವರ್ಷದ ಪುಣ್ಯಸ್ಮರಣೆ ಅವರ ಕುಟುಂಬಸ್ಥರು ಕಂಠೀರವ ಸ್ಟುಡಿಯೋದಲ್ಲಿ ಇರುವ ಅಪ್ಪು ಸಮಾಧಿಗೆ ಪೂಜೆ ನೆರವೇರಿಸಿದರು.
ಈ ವೇಳೆ ನಟ ರಾಘವೇಂದ್ರ ರಾಜ್‌ಕುಮಾರ್ ಮಾತನಾಡಿ, ಅಪ್ಪು ಅಗಲಿ ಇಂದಿಗೆ ಐದನೇ ವರ್ಷ, ಈಗಲೂ ಜನ ಇಲ್ಲಿಗೆ ಬರುತ್ತಿದ್ದಾರೆ. ಹತ್ತು ವರ್ಷ ಆದರೂ ಜನ ಹೀಗೆ ಬರುತ್ತಾರೆ. ಅಪ್ಪು ಸ್ಮಾರಕ ಆಗಬೇಕು ಎಂದು ಸಿಎಂ ಬಳಿ ಹೇಳಿದ್ದೇವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ನಾವು ಅಪ್ಪು ಜೊತೆಗೆ ಇದ್ದೇವೆ. ಇಲ್ಲಿಗೆ ಬಂದಾಗ ಇಲ್ಲ ಅನ್ನಿಸುತ್ತದೆ ಅಷ್ಟೇ. ಅವನ ಮನೆ ನನ್ನ ಮನೆ ಅಕ್ಕಪಕ್ಕದಲ್ಲೇ ಇದೆ. ಎಲ್ಲಾ ಕಡೆ ಅಪ್ಪುನೇ ಇದ್ದಾನೆ. ಅವನು ಮಾಡಿರೋ ಪುಣ್ಯ ಸಮಾಜಮುಖಿ ಕಾರ್ಯವನ್ನ ಅಭಿಮಾನಿಗಳು ಮುಂದುವರೆಸಿಕೊಂಡು ಹೋಗ್ತಿದಾರೆ. ನಮಗೆಲ್ಲ ಅಪ್ಪು ಹೇಗೆ ಬದುಕಬೇಕು ಎಂದು ಹೇಳಿಕೊಟ್ಟು ಹೋಗಿದ್ದಾರೆ. ಅಪ್ಪು ಅಭಿಮಾನಿಗಳಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ವರ್ಷದ ಎಲ್ಲ ದಿನಗಳಲ್ಲಿಯೂ ಒಂದಲ್ಲಾ ಒಂದು ರೀತಿಯಲ್ಲಿ ಅವನ ಹೆಸರಿನಲ್ಲಿ ಉತ್ತಮ ಕಾರ್ಯ ಮಾಡುತ್ತಿದ್ದೀರಿ. ಇದನ್ನು ಮುಂದುವರಿಸಿ ಎಂದಿದ್ದಾರೆ.
ಯುವ ರಾಜ್ ಕುಮಾರ್ ಮಾತನಾಡಿ, ಪ್ರತಿ ವರ್ಷ ನಮಗೆ ದಸರಾ ಬಂದಾಗ ಅಪ್ಪು ನೆನಪು ಆಗುತ್ತದೆ. ಅವರು ಎಲ್ಲೂ ಹೋಗಿಲ್ಲ ನಮ್ಮ ಜೊತೆಯಲ್ಲೇ ಇದ್ದಾರೆ. ನಾವು ಇಲ್ಲಿಗೆ ಬಂದಾಗಲೇ ಅಪ್ಪು ನಮ್ಮ ಜೊತೆ ಇಲ್ಲ ಅಂತ ಗೊತ್ತಗೋದು. ಅಪ್ಪು ಅವರ ತರ ಇರಬೇಕು. ಅವರು ಎಲ್ಲರ ಮನಸಲ್ಲಿ ಇನ್ನೂ ಕೂಡ ಅಚ್ಚಳಿಯದಂತೆ ಇದ್ದಾರೆ ಎಂದರು.



