ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಗ್ರಾಮ ಲೆಕ್ಕಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ 151 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅಭ್ಯರ್ಥಿ ಶಂಕರ್ ಬನ್ನೂರು ಅವರ ಫಲಿತಾಂಶದ ಸುತ್ತ ಭಾರೀ ಚರ್ಚೆ ನಡೆಯುತ್ತಿದೆ.
ಕಾನ್‌ಸ್ಟೆಬಲ್ ಪರೀಕ್ಷೆಯಲ್ಲಿ ಬರೀ 25 ಅಂಕ ಪಡೆದಿದ್ದ ಅಭ್ಯರ್ಥಿ ವಿಎ ಪರೀಕ್ಷೆಯಲ್ಲಿ ರಾಜ್ಯಕ್ಕೇ ಟಾಪರ್ ಆಗಲು ಹೇಗೆ ಸಾಧ್ಯ ಎನ್ನುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಹಿನ್ನೆಲೆ ಕೆಇಎ ಹಾವೇರಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪರಿಶೀಲನೆ ಮಾಡುವಂತೆ ಹೇಳಿತ್ತು. ತಹಶೀಲ್ದಾರ್ ಹಾಗೂ ಪೊಲೀಸರು ಅವರ ಮನೆಗೆ ತೆರಳಿ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ.
ಹಾನಗಲ್ ನಿವಾಸಿ ಶಂಕರ್ ಮಾತನಾಡಿದ್ದು, ನಾನು ನ್ಯಾಯವಾಗಿ ಪರೀಕ್ಷೆ ಬರೆದು ಟಾಪರ್ ಆಗಿದ್ದೇನೆ. ಕಾನ್‌ಸ್ಟೆಬಲ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿರುವ ಬಗ್ಗೆ ಎಲ್ಲೆಡೆ ಚರ್ಚೆ ಆಗುತ್ತಿದೆ. ಆ ಸಮಯದಲ್ಲಿ ನನಗೆ ಹಾಗೂ ಸಹೋದರನಿಗೆ ಭೀಕರ ಅಪಘಾತವಾಗಿತ್ತು. ಮಾನಸಿಕ ಹಾಗೂ ದೈಹಿಕ ಆಘಾತದಲ್ಲಿದ್ದೆ. ಸರಿಯಾಗಿ ಪರೀಕ್ಷೆ ಬರೆಯಲು ಸಾಧ್ಯವಾಗಿರಲಿಲ್ಲ ಎಂದಿದ್ದಾರೆ. ಇನ್ನು ನಾನು ಈ ವರ್ಷ ಪಿಯುಸಿ ಮಾಡಿದ್ದೇನೆ ಎಂದು ಹೇಳಲಾಗುತ್ತಿದೆ. ಆದರೆ ಇದು ಸುಳ್ಳು ನಾನು 2012ರಲ್ಲಿಯೇ ಪಿಯುಸಿ ಪರೀಕ್ಷೆ ಬರೆದಿದ್ದೇನೆ. ಪೊಲೀಸರು, ತಹಶೀಲ್ದಾರ್ ಅವರಿಗೆ ನನ್ನ ಎಲ್ಲ ದಾಖಲೆಗಳನ್ನು ನೀಡಿದ್ದೇನೆ ಎಂದಿದ್ದಾರೆ.
ನಾನು ಬಡವ. ಹೊಟೇಲ್ ಹಾಗೂ ಸಿನಿಮಾ ಮಂದಿರಗಳಲ್ಲಿ ಕೆಲಸ ಮಾಡಿಕೊಂಡು ಪರೀಕ್ಷೆ ಬರೆದಿದ್ದೇನೆ. ಈವರೆಗೂ 45 ಕ್ಕೂ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದಿದ್ದೇನೆ. ಸಂದರ್ಶನಗಳನ್ನು ಮಾಡಿದ್ದೇನೆ. ದೈಹಿಕ ಪರೀಕ್ಷೆಯಲ್ಲಿ ಫೇಲ್ ಆಗಿ ಕೆಲಸ ಸಿಕ್ಕಿರಲಿಲ್ಲ. ಆದರೆ ಮನಸ್ಸಿಗೆ ನೋವು ಮಾಡಿಕೊಳ್ಳದೇ ಶ್ರದ್ಧೆಯಿಂದ ಓದಿ ವಿಎ ಪರೀಕ್ಷೆಯಲ್ಲಿ ಟಾಪರ್ ಆಗಿದ್ದೇನೆ. ಪ್ರಾಮಾಣಿಕವಾಗಿದ್ದೇನೆ. ಯಾವ ರೀತಿ ಪ್ರಶ್ನೆಗಳು ಬಂದರೂ ಎದುರಿಸಲು ತಯಾರಾಗಿದ್ದೇನೆ ಎಂದು ಹೇಳಿದ್ದಾರೆ.



