ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟಿ20 ಸರಣಿಯಲ್ಲಿ ಕಿವೀಸ್ ಆಟಗಾರರು ಪರದಾಡುತ್ತಿದ್ದರೆ, ಸ್ಫೋಟಕ ಬ್ಯಾಟರ್ ಗ್ಲೆನ್ ಫಿಲಿಪ್ಸ್ ಮಾತ್ರ ತಮ್ಮ ಏಕಾಂಗಿಯಾಗಿ ಅಬ್ಬರಿಸಿದ್ದಾರೆ. ಆಕ್ಲೆಂಡ್ನಲ್ಲಿ ನಡೆದ ಪಂದ್ಯದಲ್ಲಿ ಭಾರತೀಯ ಬೌಲರ್ಗಳನ್ನು ಮನಬಂದಂತೆ ದಂಡಿಸಿದ ಫಿಲಿಪ್ಸ್, ಕೇವಲ 46 ಎಸೆತಗಳಲ್ಲಿ ಶತಕ ಪೂರೈಸಿ ಅಕ್ಷರಶಃ ಅಬ್ಬರಿಸಿದರು. ಇದು ಅವರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ವೃತ್ತಿಜೀವನದ ಮೂರನೇ ಶತಕವಾಗಿದೆ.
ಪಂದ್ಯದ ಒಂದು ಹಂತದಲ್ಲಿ ಭಾರತದ ಯುವ ಆಲ್ರೌಂಡರ್ ನಿತೀಶ್ ರೆಡ್ಡಿ ಎಸೆದ ಒಂದೇ ಓವರ್ನಲ್ಲಿ ಫಿಲಿಪ್ಸ್ ಬರೋಬ್ಬರಿ 32 ರನ್ ಕಲೆ ಹಾಕಿದರು. ಸತತ ನಾಲ್ಕು ಸಿಕ್ಸರ್ಗಳನ್ನು ಸಿಡಿಸಿ ನಂತರ ಒಟ್ಟು ಐದು ಸಿಕ್ಸರ್ಗಳನ್ನು ಬಾರಿಸಿ ಮಿಂಚಿದ ಅವರು, ಅಂತಿಮವಾಗಿ 107 ರನ್ ಗಳಿಸಿ ಔಟಾದರು. ಇವರ ಈ ಸ್ಫೋಟಕ ಇನ್ನಿಂಗ್ಸ್ನಲ್ಲಿ ಒಟ್ಟು 10 ಭರ್ಜರಿ ಸಿಕ್ಸರ್ಗಳು ಸೇರಿದ್ದವು. ಅಲ್ಲದೆ, ಡೌಗ್ ಬ್ರೇಸ್ವೆಲ್ ಜೊತೆಗೂಡಿ ಕೇವಲ 40 ಎಸೆತಗಳಲ್ಲಿ 115 ರನ್ಗಳ ಅಜೇಯ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು.
ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ನ್ಯೂಜಿಲೆಂಡ್ ತಂಡ ನಿಗದಿತ 20 ಓವರ್ಗಳಲ್ಲಿ 259 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಟಿ20 ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಎದುರು ಯಾವುದೇ ತಂಡ ಗಳಿಸಿದ ಅತ್ಯಧಿಕ ಮೊತ್ತ ಇದಾಗಿದೆ. ಈ ಮೂಲಕ ಟೀಂ ಇಂಡಿಯಾ ಬೌಲಿಂಗ್ ಪಡೆ ದುಬಾರಿಯಾಗುವ ಮೂಲಕ ಬೇಡದ ದಾಖಲೆಯೊಂದಕ್ಕೆ ಸಾಕ್ಷಿಯಾಯಿತು.
ಒಟ್ಟಾರೆಯಾಗಿ ಗ್ಲೆನ್ ಫಿಲಿಪ್ಸ್ ಅವರ ಈ ಕಾವೇರಿದ ಆಟ ಕ್ರಿಕೆಟ್ ಅಭಿಮಾನಿಗಳಿಗೆ ಮನರಂಜನೆಯದರ ಜೊತೆಗೆ ಕಿವೀಸ್ ಪಡೆಗೆ ಹೊಸ ಹುರುಪು ತಂದುಕೊಟ್ಟಿದೆ.



