ಹೊಸದಿಗಂತ ವರದಿ ಬೆಳಗಾವಿ :
ಸಮಾಜದಲ್ಲಿ ಭ್ರಷ್ಟಾಚಾರ ಎಂಬ ಭೂತವನ್ನು ನಾವೆಲ್ಲರೂ ಕೂಡಿ ಬೆಳೆಸಿಕೊಂಡು ಬಂದಿದ್ದೇವೆ. ಭ್ರಷ್ಟಾಚಾರವನ್ನು ಬರೀ ಲೋಕಾಯುಕ್ತ ಸಂಸ್ಥೆಯಿಂದ ನಿರ್ಮೂಲನೆ ಮಾಡುವುದು ಸಾಧ್ಯವಿಲ್ಲ ಸಮಾಜದ ಪ್ರತಿಯೊಬ್ಬರೂ ಭ್ರಷ್ಟಾಚಾರ ನಿರ್ಮೂಲನೆಗೆ ಸಂಕಲ್ಪ ಮಾಡಬೇಕು ಎಂದು ಕರ್ನಾಟಕ ಉಪ ಲೋಕಾಯುಕ್ತರಾದ ನ್ಯಾಯನೂರ್ತಿ ಬಿ.ವೀರಪ್ಪ ಕರೆ ನೀಡಿದರು.
ಸುವರ್ಣ ವಿಧಾನಸೌಧದ ಸೆಂಟ್ರಲ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಬೆಳಗಾವಿ ಮತ್ತು ಬೈಲಹೊಂಗಲ ಉಪ ವಿಭಾಗಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ಪ್ರಕರಣಗಳ ವಿಚಾರಣೆ ಹಾಗೂ ವಿಲೇವಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಸಕಾಂಗ, ಕಾರ್ಯಾಂಗಗಳು ವಿಫಲವಾಗುತ್ತಿರುವ ಇಂತಹ ಸಂದಿಗ್ಧ ಸ್ಥಿತಿಯಲ್ಲಿ ನ್ಯಾಯಾಂಗ ಮತ್ತು ನಾಲ್ಕನೇ ಅಂಗ ಎಂದು ಕರೆಯಲಾಗುವ ಪತ್ರಿಕಾರಂಗ ಕೂಡ ಇತ್ತೀಚೆಗೆ ಅಶಕ್ತವಾಗುತ್ತಿವೆ ಎಂದು ಅನಿಸತೊಡಗಿದೆ. ಸಮಾಜದಲ್ಲಿ ಎಲ್ಲೇ ಅನ್ಯಾಯ ಆದಾಗ ನ್ಯಾಯಾಂಗ ಮತ್ತು ಪತ್ರಿಕಾರಂಗಗಳು ಧ್ವನಿ ಎತ್ತುವ ಮೂಲಕ ಸಂವಿಧಾನವನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿವೆ.
ಕರ್ನಾಟಕ ಲೋಕಾಯುಕ್ತ ತನ್ನ ನಿಷ್ಪಕ್ಷಪಾತ ತನಿಖೆ ಹಾಗೂ ಕಾರ್ಯಾಚರಣೆಯಿಂದ ದೇಶದಲ್ಲಿ ತನ್ನದೇ ಛಾಪು ಮೂಡಿಸಿದೆ. ಆದಾಗ್ಯೂ ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸ ಸಾಧ್ಯವಾಗುತ್ತಿಲ್ಲ; ಭ್ರಷ್ಟಾಚಾರಿಗಳನ್ನು ಸಮಾಜ ಮತ್ತು ಕುಟುಂಬದವರು ಬಹಿಷ್ಕರಿಸಬೇಕು. ಭ್ರಷ್ಟಾಚಾರ ನಿರ್ಮೂಲನೆಗೆ ಇದೇ ಮದ್ದು ಎಂದು ನ್ಯಾಯಮೂರ್ತಿ ಬಿ.ವೀರಪ್ಪ ಹೇಳಿದರು.
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ್ ನಾಯಕ್ , ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಕರ್ನಾಟಕ ಲೋಕಾಯುಕ್ತ ಉಪ ನಿಬಂಧಕರು(ವಿಚಾರಣೆ) ಅರವಿಂದ, ಬೆಳಗಾವಿ ಡಿಎಫ್ಓ ಕ್ರಾಂತಿ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ ಮತ್ತಿತರರು ಉಪಸ್ಥಿತರಿದ್ದರು.
ಬೆಳಗಾವಿ ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಪ್ರಸನ್ನ ದೇಸಾಯಿ ಅವರು ಸ್ವಾಗತಿಸಿದರು.
ಬೆಳಗಾವಿ ಹಾಗೂ ಬೈಲಹೊಂಗಲ ಉಪ ವಿಭಾಗದ ವ್ಯಾಪ್ತಿಯಲ್ಲಿನ ದೂರುದಾರರು ಮತ್ತು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.



