October 30, 2026
Friday, October 30, 2026
spot_img

ಉತ್ತರ ಕರ್ನಾಟಕದ ಕಲಾ ಕ್ಷೇತ್ರಕ್ಕೆ ಪ್ರಶಸ್ತಿಗಳ ಸಂಭ್ರಮ: ಜಯಲಕ್ಷ್ಮೀ ಪಾಟೀಲ್, ಬಾಬ್ಜಿಗೆ ಒಲಿದ ರಾಜ್ಯೋತ್ಸವ ಗೌರವ

ಹೊಸದಿಗಂತ ವರದಿ ಹುಬ್ಬಳ್ಳಿ:

ಕಲೆಯನ್ನೇ ಬದುಕಾಗಿಸಿಕೊಂಡ ಹಿರಿಯ ರಂಗಕಲಾವಿದೆ ಜಯಲಕ್ಷ್ಮೀ ಪಾಟೀಲ್ ಹಾಗೂ ಉತ್ತರ ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳ ಪ್ರಸಾರಕ್ಕೆ ಮಹತ್ವದ ಕೊಡುಗೆ ನೀಡಿದ ಚಲನಚಿತ್ರ ವಿತರಕ ಕೆ. ವೆಂಕಟರಮಣ ಬಾಬ್ಜಿ ಅವರಿಗೆ ಈ ಬಾರಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ. ಇಬ್ಬರ ಆಯ್ಕೆಯಿಂದ ಹುಬ್ಬಳ್ಳಿಯ ಕಲಾ ಮತ್ತು ಚಿತ್ರರಂಗದ ವಲಯದಲ್ಲಿ ಸಂತಸ ಮನೆಮಾಡಿದೆ.

ಮೂರು ತಿಂಗಳ ವಯಸ್ಸಿನಲ್ಲೇ ರಂಗಪ್ರವೇಶ

ಮೂಲತಃ ವಿಜಯಪುರ ಜಿಲ್ಲೆಯ ನಿಂಬಾಳದವರಾದ ಜಯಲಕ್ಷ್ಮೀ ಪಾಟೀಲ್, ವೃತ್ತಿ ರಂಗಭೂಮಿ ಕಲಾವಿದರ ಕುಟುಂಬದಲ್ಲಿ ಜನಿಸಿದವರು. ತಾಯಿ ರಾಧಾಬಾಯಿ ಅವರು ಮೂರು ತಿಂಗಳ ಮಗುವಾಗಿದ್ದಾಗಲೇ ಮಡಿಲಲ್ಲಿ ಕೂರಿಸಿ ಮೊದಲ ಬಾರಿಗೆ ನಾಟಕದಲ್ಲಿ ಅಭಿನಯಿಸುವಂತೆ ಮಾಡಿದ್ದರು. ತಂದೆ ಚನ್ನಬಸವರಾಜ ಅವರ ಸಹಕಾರವೂ ಈ ಕಲಾ ಪಯಣಕ್ಕೆ ಬೆನ್ನೆಲುಬಾಗಿತ್ತು. ಅಂದಿನಿಂದ ಆರಂಭವಾದ ರಂಗಯಾನ ಬರೋಬ್ಬರಿ 73 ವರ್ಷಗಳ ಕಾಲ ಮುಂದುವರಿದಿದೆ.

ಐದನೇ ತರಗತಿವರೆಗೆ ಮಾತ್ರ ಶಿಕ್ಷಣ ಪಡೆದಿದ್ದರೂ, ರಂಗಭೂಮಿಯನ್ನೇ ಜೀವನಾಧಾರವಾಗಿಸಿಕೊಂಡ ಅವರು ನಾಟಕಗಳ ಮೂಲಕ ಊರೂರು ಸಂಚರಿಸಿ ಸಾಮಾಜಿಕ ಜಾಗೃತಿ ಮೂಡಿಸಿದ್ದಾರೆ. ಬಿ.ವಿ. ಕಾರಂತ, ಸಿ. ಬಸವಲಿಂಗಯ್ಯ, ಸುರೇಶ್ ಆನಗಳ್ಳಿ ಅವರ ನಿರ್ದೇಶನದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ‘ಜೋಕುಮಾರಸ್ವಾಮಿ’, ‘ಸತ್ತವರ ನೆರಳು’, ‘ಮಹಾಮಾಯಿ’, ‘ಬೆರಳ್ಗೆ ಕೊರಳ್’ ಪ್ರಮುಖ ನಾಟಕಗಳು. ‘ರಾಮಾಚಾರಿ’, ‘ಕುಲವಧು’, ‘ಬದುಕು’, ‘ನಾಗಿಣಿ’ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ‘ಪುಟಾಣಿ ಪಾರ್ಟಿ’, ‘ಸಕುಟುಂಬ ಸಮೇತ’, ‘ಬ್ಯಾಚುಲರ್ ಪಾರ್ಟಿ’ ಸಿನಿಮಾಗಳಲ್ಲಿ ಅಭಿನಯಿಸಿದ್ದು, ‘ಪುಟಾಣಿ ಪಾರ್ಟಿ’ಗೆ ಸಂಭಾಷಣೆಯನ್ನೂ ಬರೆದಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಕಳೆದ ಆರು ತಿಂಗಳಿಂದ ನಟನೆಯಿಂದ ದೂರ ಉಳಿದಿದ್ದಾರೆ. 2022ರ ಸೇವಾರತ್ನ, 2023ರ ಪದ್ಮಭೂಷಣ ಬಿ. ಸರೋಜಾದೇವಿ ಸಾಹಿತ್ಯ ದತ್ತಿ ಪ್ರಶಸ್ತಿ ಹಾಗೂ 2025ರ ‘ನಿಸ್ಸೀಮ ಕನ್ನಡತಿ’ ಗೌರವಗಳೂ ಅವರಿಗೆ ಸಂದಿವೆ. ರಾಜ್ಯೋತ್ಸವ ಪ್ರಶಸ್ತಿ ತಡವಾಗಿ ಬಂದರೂ ಸೂಕ್ತ ಸಮಯದಲ್ಲಿ ದೊರೆತಿದೆ ಎಂದು ಜಯಲಕ್ಷ್ಮೀ ಸಂತಸ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

ಉತ್ತರ ಕರ್ನಾಟಕದಲ್ಲಿ ಕನ್ನಡ ಚಿತ್ರಗಳ ಪ್ರಸಾರಕ್ಕೆ ಕೊಡುಗೆ

ಇನ್ನೊಂದೆಡೆ, 80 ವರ್ಷದ ಕೆ. ವೆಂಕಟರಮಣ ಬಾಬ್ಜಿ ಅವರು ಶ್ರೀನಿವಾಸ ಪಿಕ್ಚರ್ಸ್ ಮೂಲಕ ಕನ್ನಡ ಚಿತ್ರಗಳ ವಿತರಣೆ ಮತ್ತು ಪ್ರದರ್ಶನ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ತಂದೆ ಕೆ.ವಿ. ರಾಜು ಅವರ ಹಾದಿಯಲ್ಲಿ ಸಾಗಿದ ಅವರು, ದ್ವಾರಕೀಶ್ ನಿರ್ಮಾಣದ ‘ಸಿಂಗಾಪುರದಲ್ಲಿ ರಾಜಾಕುಳ್ಳ’ ಚಿತ್ರದ ಮೂಲಕ ವಿತರಕರಾಗಿ ವೃತ್ತಿ ಆರಂಭಿಸಿದರು.

‘ಸತ್ಯ ಹರಿಶ್ಚಂದ್ರ’, ‘ಬಂಗಾರದ ಮನುಷ್ಯ’, ‘ಭಕ್ತ ಕುಂಬಾರ’, ‘ಪ್ರೇಮಲೋಕ’, ‘ರಾಮಾಚಾರಿ’, ‘ಶಾಂತಿ ಕ್ರಾಂತಿ’, ‘ಗಂಧದ ಗುಡಿ’, ‘ಗುರು ಶಿಷ್ಯರು’ ಸೇರಿದಂತೆ ಹಲವು ಚಿತ್ರಗಳನ್ನು ಉತ್ತರ ಕರ್ನಾಟಕದಲ್ಲಿ ವಿತರಿಸಿದ್ದಾರೆ. ಹಿಂದಿ ಚಿತ್ರಗಳ ವಿತರಣೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸುವರ್ಣ ಮಹೋತ್ಸವದಲ್ಲಿ ‘ಉತ್ತಮ ವಿತರಕ’ ಪ್ರಶಸ್ತಿ ಹಾಗೂ 2016ರಲ್ಲಿ ‘ಬಿ. ಜಯಮ್ಮ ಪ್ರಶಸ್ತಿ’ ಪಡೆದಿದ್ದಾರೆ. ವಾಣಿಜ್ಯ ಮಂಡಳಿಯಲ್ಲಿ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಒಂದು ಕಾಲದಲ್ಲಿ ಉತ್ತರ ಕರ್ನಾಟಕದಲ್ಲಿ ಮರಾಠಿ ಮತ್ತು ಹಿಂದಿ ಚಿತ್ರಗಳ ಪ್ರದರ್ಶನ ಹೆಚ್ಚಿದ್ದ ಸಂದರ್ಭದಲ್ಲಿ ಕನ್ನಡ ಸಿನಿಮಾಗಳಿಗೂ ಮಾರುಕಟ್ಟೆ ಸೃಷ್ಟಿಸಲು ತಂದೆಯೊಂದಿಗೆ ಶ್ರಮಿಸಿದ್ದೇ ತಮ್ಮ ತೃಪ್ತಿ ಎಂದು ಬಾಬ್ಜಿ ಹೇಳಿದ್ದಾರೆ.

Must Read