October 30, 2026
Friday, October 30, 2026
spot_img

ಹೈಕೋರ್ಟ್ ತರಾಟೆಯ ಬೆನ್ನಲ್ಲೇ ಸರ್ಕಾರದ ಕ್ರಮ: ಕೆಪಿಎಸ್‌ಸಿ ನೇಮಕಾತಿ ಹಗರಣದ ತನಿಖೆಗೆ ಎಸ್‌ಐಟಿ ರಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ಹಗರಣ ಪ್ರಕರಣದ ತನಿಖೆಗೆ ವೇಗ ನೀಡಲು ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಪ್ರಕರಣದ ಸಮಗ್ರ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ಆದೇಶ ಹೊರಡಿಸಿದ್ದು, ತಂಡಕ್ಕೆ ಪೊಲೀಸ್ ಠಾಣೆಯ ಸ್ಥಾನಮಾನವನ್ನೂ ನೀಡಿದೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ತನಿಖೆಯನ್ನು ಇನ್ನು ಮುಂದೆ ಈ ವಿಶೇಷ ತಂಡ ನಿರ್ವಹಿಸಲಿದೆ.

ಹೈಕೋರ್ಟ್ ತರಾಟೆಯ ಬೆನ್ನಲ್ಲೇ ಕ್ರಮ

ಎಸ್‌ಐಟಿ ರಚನೆ ಮತ್ತು ಅದಕ್ಕೆ ಅಗತ್ಯವಾದ ಕಾನೂನುಬದ್ಧ ಅಧಿಕಾರ ನೀಡುವ ವಿಚಾರದಲ್ಲಿ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಹೈಕೋರ್ಟ್ ಈ ಹಿಂದೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ವಿಶೇಷ ತನಿಖಾ ತಂಡವನ್ನು ರಚಿಸಿ, ಅದನ್ನು ಸಕ್ಷಮ ಪೊಲೀಸ್ ಠಾಣೆಯನ್ನಾಗಿ ರೂಪಿಸುವಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ನ್ಯಾಯಾಲಯ ಸರ್ಕಾರವನ್ನು ಪ್ರಶ್ನಿಸಿತ್ತು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಎಸ್‌ಐಟಿ ರಚನೆಗೆ ಸಂಬಂಧಿಸಿದ ಆದೇಶ ಹೊರಡಿಸಿದೆ.

ನಾಲ್ವರು ಹಿರಿಯ ಅಧಿಕಾರಿಗಳ ಹೆಸರು ಸಲ್ಲಿಕೆ

ಎಸ್‌ಐಟಿ ಮುಖ್ಯಸ್ಥರು ಹಾಗೂ ಮತ್ತೊಬ್ಬ ಸದಸ್ಯರ ನೇಮಕಾತಿ ಕುರಿತು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ನಾಲ್ವರು ಎಡಿಜಿಪಿ ಹಂತದ ಅಧಿಕಾರಿಗಳ ಹೆಸರುಗಳನ್ನು ಸಲ್ಲಿಸಿದೆ. ಆರ್. ಹಿತೇಂದ್ರ, ಬಿ.ಕೆ. ಸಿಂಗ್, ಎಸ್. ಮುರುಗನ್ ಮತ್ತು ಸೌಮೆಂದು ಮುಖರ್ಜಿ ಅವರ ಹೆಸರುಗಳು ಪಟ್ಟಿಯಲ್ಲಿವೆ. ಎಸ್‌ಐಟಿ ಮುಖ್ಯಸ್ಥರ ನೇಮಕಾತಿಯನ್ನು ಸೋಮವಾರ ಅಂತಿಮಗೊಳಿಸುವುದಾಗಿ ತಿಳಿಸಲಾಗಿದೆ.

ಇದನ್ನೂ ಓದಿ:

ಹಲವು ನೇಮಕಾತಿ ಅಕ್ರಮಗಳ ತನಿಖೆ

ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯ ಕೀ ಉತ್ತರ ಸೋರಿಕೆ ಪ್ರಕರಣ ಸೇರಿದಂತೆ ಕೆಪಿಎಸ್‌ಸಿಗೆ ಸಂಬಂಧಿಸಿದ ಹಲವು ಅಕ್ರಮಗಳ ತನಿಖೆಯನ್ನು ಎಸ್‌ಐಟಿ ಮುಂದುವರಿಸಲಿದೆ. ಈ ಪ್ರಕರಣದಲ್ಲಿ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕರ್, ಸದಸ್ಯೆ ಬಿ.ವಿ. ಗೀತಾ, ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಹಾಗೂ ಮಧ್ಯವರ್ತಿ ಬಸವರಾಜ ಕಣ್ಣಾಳೆ ಅವರ ಬಂಧನದ ವಿಚಾರಗಳೂ ತನಿಖೆಯ ವ್ಯಾಪ್ತಿಯಲ್ಲಿವೆ.

Must Read