ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಅರ್ನಾಬ್’ ಚಂಡಮಾರುತದ ಹೊಡೆತಕ್ಕೆ ಒಡಿಶಾ ರಾಜ್ಯ ತತ್ತರಗೊಡಿದೆ. ಚಂಡಮಾರುತದ ಪ್ರಭಾವದಿಂದ ಸುರಿದ ಭಾರೀ ಮಳೆಗೆ ಒಡಿಶಾದ ಕಂಧಮಾಲ್ ಜಿಲ್ಲೆಯಲ್ಲಿ ಭೀಕರ ಪ್ರವಾಹ ಹಾಗೂ ಭೂಕುಸಿತ ಸಂಭವಿಸಿದ್ದು, ಮೂವರು ಸಾವನ್ನಪ್ಪಿದ್ದಾರೆ.
ಪ್ರವಾಹದಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಲಾಗಿದ್ದು, ಸದ್ಯ ರಕ್ಷಣಾ ಕಾರ್ಯಾಚರಣೆಗಳು ಮುಕ್ತಾಯದ ಹಂತಕ್ಕೆ ತಲುಪಿವೆ ಎಂದು ಕಂಧಮಾಲ್ ಜಿಲ್ಲಾಧಿಕಾರಿ ವೇದ್ ಭೂಷಣ್ ತಿಳಿಸಿದ್ದಾರೆ.
ಜಿಲ್ಲೆಯ ರೈಕಿಯಾ ಬ್ಲಾಕ್ ಅತ್ಯಂತ ಹೆಚ್ಚು ಹಾನಿಗೊಳಗಾಗಿದ್ದು, ಮಳೆಯ ಆರ್ಭಟಕ್ಕೆ ಹತ್ತಾರು ಹಳ್ಳಿಗಳು ಸಂಪೂರ್ಣವಾಗಿ ಸಂಪರ್ಕ ಕಳೆದುಕೊಂಡಿದ್ದವು. ಸದ್ಯ ಜಿಲ್ಲಾಡಳಿತವು ಈ ಗ್ರಾಮಗಳೊಂದಿಗೆ ಮತ್ತೆ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾಗಿದ್ದು, ಸಂತ್ರಸ್ತರಿಗೆ ಅಗತ್ಯ ಸಾಮಗ್ರಿಗಳನ್ನು ಪೂರೈಸಲಾಗುತ್ತಿದೆ.
ಕೊಚ್ಚಿಹೋದ ಮನೆಗಳು, ಮುರಿದುಬಿದ್ದ ಸಂಪರ್ಕ
ಜಿಲ್ಲೆಯ ಡಂಗೇಸಿ ಗ್ರಾಮದಲ್ಲಿ ಪ್ರವಾಹದ ಅಬ್ಬರಕ್ಕೆ ಮನೆಗಳು ಕೊಚ್ಚಿಹೋಗಿದ್ದು, ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಇದೇ ವೇಳೆ ವೃದ್ಧೆ ಹಾಗೂ ಆಕೆಯ ಮಗನನ್ನು ಸುರಕ್ಷಿತವಾಗಿ ರಕ್ಷಿಸಿ, ಸದ್ಯ ಅವರಿಗೆ ಪಡಿತರ, ಕುಡಿಯುವ ನೀರು ಮತ್ತು ಔಷಧೋಪಚಾರಗಳನ್ನು ಒದಗಿಸಲಾಗುತ್ತಿದೆ. ಗಜಪತಿ-ಗಂಜಾಂ ಗಡಿಯಲ್ಲಿರುವ ತಪ್ತಪಾನಿ ಘಾಟ್‌ನಲ್ಲಿ ಗುರುವಾರ ಭೂಕುಸಿತ ಸಂಭವಿಸಿದ್ದು, ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಗಜಪತಿ ಜಿಲ್ಲೆಯ ಲೆಡ್‌ಬಂಧ್ ಬಳಿ ರಾಷ್ಟ್ರೀಯ ಹೆದ್ದಾರಿ 326ರ ಒಂದು ಭಾಗವೇ ಪ್ರವಾಹಕ್ಕೆ ಕೊಚ್ಚಿಹೋಗಿದೆ.
ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ
ರಸ್ತೆಗಳ ಮೇಲೆ ಬಿದ್ದಿರುವ ಮಣ್ಣು ಮತ್ತು ಕಲ್ಲುಗಳನ್ನು ತೆರವುಗೊಳಿಸಲು ಜೆಸಿಬಿ ಯಂತ್ರಗಳನ್ನು ನಿಯೋಜಿಸಲಾಗಿದ್ದು, ಸಂಪರ್ಕ ಕಡಿತಗೊಂಡಿರುವ ಹಳ್ಳಿಗಳಿಗೆ ರಸ್ತೆಗಳನ್ನು ಮರುನಿರ್ಮಾಣ ಮಾಡಲಾಗುತ್ತಿದೆ.
ಇದನ್ನೂ ಓದಿ:
ಸ್ಥಳದಲ್ಲೇ ಮೊಕ್ಕಾಂ ಹೂಡಿದ ಸಚಿವರು
ಒಡಿಶಾದ ಪಂಚಾಯತ್ ರಾಜ್ ಸಚಿವ ರಬಿ ನಾರಾಯಣ್ ನಾಯಕ್ ಅವರು ಸ್ವತಃ ಕಂಧಮಾಲ್ ಜಿಲ್ಲೆಯಲ್ಲೇ ಮೊಕ್ಕಾಂ ಹೂಡಿದ್ದು, ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ರಕ್ಷಣಾ ಹಾಗೂ ಪರಿಹಾರ ಕಾರ್ಯಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಸದ್ಯ ಕಂಧಮಾಲ್‌ನಲ್ಲಿ ರಕ್ಷಣಾ ಕಾರ್ಯ ಮುಗಿಯುತ್ತಾ ಬಂದಿದ್ದು, ನೆರೆ ಜಿಲ್ಲೆಯಾದ ಗಂಜಾಂನ ಪ್ರವಾಹ ಪೀಡಿತ ಪ್ರದೇಶಗಳಿಗೂ ಇವರ ಸಹಾಯ ಹಸ್ತ ಚಾಚಲಾಗಿದೆ. ಇನ್ನು ಮುಂದೆ ಮಳೆ ಬಾರದಿರಲಿ ಎಂದು ಪ್ರಾರ್ಥಿಸುತ್ತಿರುವುದಾಗಿ ಜಿಲ್ಲಾಧಿಕಾರಿಗಳು ಆಶಯ ವ್ಯಕ್ತಪಡಿಸಿದ್ದಾರೆ.



