October 31, 2026
Saturday, October 31, 2026
spot_img

ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತ, ಖಜಾನೆ ಖಾಲಿ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

ಹೊಸದಿಗಂತ ವರದಿ ಚಿತ್ರದುರ್ಗ:

ರಾಜ್ಯ ಸರ್ಕಾರದಲ್ಲಿ ಆಡಳಿತ ಯಂತ್ರ ಸಂಪೂರ್ಣ ಹದಗೆಟ್ಟಿದ್ದು, ಸರ್ಕಾರದ ವೈಫಲ್ಯಗಳಿಂದಾಗಿ ಜನಸಾಮಾನ್ಯರು ಮತ್ತು ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈ ರೀತಿಯ ಆಡಳಿತ ಮುಂದುವರೆದರೆ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಭವಿಷ್ಯ ನುಡಿದರು.

ಚಿತ್ರದುರ್ಗ ನಗರಕ್ಕೆ ಶನಿವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಖಜಾನೆ ಖಾಲಿಯಾಗಿದೆ. ಸಾರಿಗೆ ಇಲಾಖೆಯ ಬಸ್‌ಗಳನ್ನು ಓಡಿಸಲು ಡೀಸೆಲ್‌ಗೆ ಹಣವಿಲ್ಲದಂತಾಗಿದ್ದು, ರೈತರಿಗೆ ನೀಡುವ ಪರಿಹಾರ ಮೊತ್ತದಲ್ಲೂ ಕಡಿತ ಮಾಡಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸ್ವತಃ ಸರ್ಕಾರದವರೇ ಡೀಸೆಲ್‌ಗೆ ಕಾಸಿಲ್ಲ ಎಂದು ಹೇಳುತ್ತಿದ್ದು, ಸಾರಿಗೆ ಇಲಾಖೆಯ ಬಸ್‌ಗಳನ್ನು ಓಡಿಸಲು ಡೀಸೆಲ್‌ಗೆ ಗತಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕಬ್ಬು ಬೆಳೆಗಾರರು ಪರಿಹಾರಕ್ಕಾಗಿ ಹೋರಾಟ ಮಾಡುತ್ತಿದ್ದರೂ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂಬ ಉತ್ತರ ನೀಡಲಾಗುತ್ತಿದೆ. ಹಣಕಾಸು ಇಲಾಖೆ ಸಂಪೂರ್ಣ ಖಾಲಿಯಾಗಿದ್ದು, ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಹೋದರೂ ಯಾರು ಸಾಲ ನೀಡದ ಸ್ಥಿತಿ ಉಂಟಾಗಿದೆ ಎಂದು ಲೇವಡಿ ಮಾಡಿದರು.

ರೈತರಿಗೆ ಪ್ರತಿ ಎಕರೆಗೆ 25,000 ರೂ. ಬರ ಪರಿಹಾರ ನೀಡುವಂತೆ ಕೇಳಿದರೆ, ಅದಕ್ಕೂ 17 ನಿಬಂಧನೆಗಳನ್ನು ವಿಧಿಸಲಾಗಿದೆ. ಸುಖ ಸಂಸಾರಕ್ಕೆ 12 ಸೂತ್ರಗಳು ಎನ್ನುವಂತೆ, ರೈತರಿಗೆ 17 ಸೂತ್ರಗಳನ್ನು ಹಾಕಲಾಗಿದೆ. ರಾಜ್ಯದಲ್ಲಿ ರಸ್ತೆಗಳು ಹದಗೆಟ್ಟಿದ್ದು, ಹಳ್ಳಗಳು ಬಿದ್ದಿವೆ. ಯಾವುದೇ ನೀರಾವರಿ ಯೋಜನೆಗೆ ಹಣ ಬಿಡುಗಡೆಯಾಗಿಲ್ಲ. ಅಧಿಕಾರಕ್ಕೆ ಬಂದು ಐದು ತಿಂಗಳಾದರೂ ರೈತರ ಪಾಲಿಗೆ ಸರ್ಕಾರ ಸತ್ತಂತಾಗಿದೆ. ಎಲ್ಲಾ ಕಡೆ ಲೂಟಿ ಹಾಗೂ ಕರಪ್ಷನ್ ನಡೆಯುತ್ತಿದೆ. ಈಗ ಬೆಂಗಳೂರು ಕಸದಲ್ಲೂ ಲೂಟಿ ಮುಂದುವರೆದಿದೆ ಎಂದು ಗಂಭೀರ ಆರೋಪ ಮಾಡಿದರು.

ಇದನ್ನೂ ಓದಿ:

ಸಿಡಿ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ನೀಡಿರುವುದನ್ನು ಪ್ರಸ್ತಾಪಿಸುತ್ತಾ, ಅವರನ್ನು ಕೇವಲ ಅವಮಾನ ಮಾಡಿ ಮನೆಯಿಂದ ಹೊರಹೋಗದಂತೆ ಮಾಡಿದ್ದಾರೆ. ಇಂದು ಜನಸಾಮಾನ್ಯರಿಗಿಂತ ಸ್ವತಃ ಕಾಂಗ್ರೆಸ್ ಪಕ್ಷದ ಶಾಸಕರೇ ಪಕ್ಷದ ಬಗ್ಗೆ ಬೇಸತ್ತಿದ್ದಾರೆ. ಅವರಿಗೆ ಅಭಿವೃದ್ಧಿಗೆ ಯಾವುದೇ ಅನುದಾನ ಸಿಗುತ್ತಿಲ್ಲ. ಜನಸಾಮಾನ್ಯರ ಮೇಲೆ ಪದೇ ಪದೇ ಬೆಲೆ ಏರಿಕೆಯ ಹೊರೆ ಹಾಕಲಾಗುತ್ತಿದೆ. ಹಾಲಿನ ದರ 8 ರೂ. ಏರಿಕೆ ಮಾಡಲಾಗಿದೆ. ಇದರಿಂದ ಕಾಫಿ, ಟೀ ಹಾಗೂ ಮೊಸರು ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚಾಗಿ ಜನರಿಗೆ ತೊಂದರೆಯಾಗುತ್ತಿದೆ ಎಂದು ಕಿಡಿಕಾರಿದರು.

ಈ ಸಂದರ್ಭದಲ್ಲಿ ಶಾಸಕ ಡಾ.ಎಂ.ಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಯಾದವ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೆ, ಗ್ರಾಮಾಂತರ ಅಧ್ಯಕ್ಷ ನಾಗರಾಜ್, ಛಲವಾದಿ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

Must Read

Skip to toolbar