ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ವಾರದ ಆರಂಭವೇ ಭಾರತೀಯ ಷೇರು ಮಾರುಕಟ್ಟೆಗೆ ಅತ್ಯಂತ ಶುಭ ಸೂಚನೆ ನೀಡಿದೆ. ಕಳೆದ ವಾರದ ಏರಿಕೆಯ ವೇಗವನ್ನು ಮುಂದುವರಿಸಿರುವ ಮಾರುಕಟ್ಟೆಯಲ್ಲಿ ಇಂದು ಗೂಳಿಗಳ ಅಬ್ಬರ ಜೋರಾಗಿದೆ. ವಹಿವಾಟು ಆರಂಭವಾಗುತ್ತಿದ್ದಂತೆ ನಿಫ್ಟಿ 250ಕ್ಕೂ ಹೆಚ್ಚು ಅಂಕಗಳ ಜಿಗಿತ ಕಂಡು 23,300ರ ಗಡಿಯನ್ನು ಮುಟ್ಟಿದ್ದರೆ, ಬಿಎಸ್ಇ ಸೆನ್ಸೆಕ್ಸ್ ಸುಮಾರು 1,000 ಅಂಕಗಳ ಏರಿಕೆ ಕಾಣುವ ಮೂಲಕ 75,500ರ ಗಡಿಗೆ ತಲುಪಿ ಹೂಡಿಕೆದಾರರಲ್ಲಿ ಹೊಸ ಭರವಸೆ ಮೂಡಿಸಿದೆ.
ರಿಲಯನ್ಸ್ ಭರ್ಜರಿ ಕಮಾಲ್
ಇಂದಿನ ಮಾರುಕಟ್ಟೆಯ ರಿಯಲ್ ಹೀರೋ ಎಂದರೆ ಅದು ರಿಲಯನ್ಸ್ ಇಂಡಸ್ಟ್ರೀಸ್. ಶುಕ್ರವಾರ ಪ್ರಕಟಗೊಂಡ ಎರಡನೇ ತ್ರೈಮಾಸಿಕದ ಅತ್ಯುತ್ತಮ ಆರ್ಥಿಕ ಫಲಿತಾಂಶದ ಹಿನ್ನೆಲೆಯಲ್ಲಿ, ರಿಲಯನ್ಸ್ ಶೇರುಗಳು ಇಂಟ್ರಾಡೇ ವಹಿವಾಟಿನಲ್ಲಿ ಶೇಕಡಾ 5ಕ್ಕಿಂತಲೂ ಹೆಚ್ಚು ಜಿಗಿತ ಕಂಡು ಗೂಳಿ ಓಟಕ್ಕೆ ಪ್ರಮುಖ ಶಕ್ತಿಯಾಗಿ ನಿಂತಿವೆ.
ಆಟೋ ಸೇಲ್ಸ್, ನೂತನ ಕಂಪನಿಗಳ ರಿಸಲ್ಟ್ಸ್
ಮಾರುಕಟ್ಟೆಯಲ್ಲಿ ಪ್ರಮುಖ ಆಟೋಮೊಬೈಲ್ ಕಂಪನಿಗಳಾದ ಮಾರುತಿ ಸುಜುಕಿ, ಮಹೀಂದ್ರಾ ಅಂಡ್ ಮಹೀಂದ್ರಾ (M&M) ಸೇರಿದಂತೆ ಪ್ರಮುಖ ಆಟೋ ಷೇರುಗಳು ಧನಾತ್ಮಕ ಚಲನೆ ಪ್ರದರ್ಶಿಸುತ್ತಿವೆ. ಹಬ್ಬದ ಋತುವಾಗಿದ್ದ ಅಕ್ಟೋಬರ್ ತಿಂಗಳ ವಾಹನ ಮಾರಾಟದ ಅಂಕಿ-ಅಂಶಗಳು ಪ್ರಕಟಗೊಂಡಿದ್ದು, ಷೇರುದಾರರು ಈ ಕಂಪನಿಗಳ ಷೇರುಗಳ ಮೇಲೆಯೂ ತೀವ್ರ ನಿಗಾ ವಹಿಸಿದ್ದಾರೆ.
ಫಲಿತಾಂಶದ ರೇಸ್ನಲ್ಲಿ ಪ್ರಮುಖ ಕಂಪನಿಗಳು
ಕೇವಲ ರಿಲಯನ್ಸ್ ಮಾತ್ರವಲ್ಲದೆ, ಇತ್ತೀಚೆಗೆ ತಮ್ಮ ಆರ್ಥಿಕ ಫಲಿತಾಂಶ ಪ್ರಕಟಿಸಿರುವ ಡಿಕ್ಸನ್ ಟೆಕ್, ಮುಥೂಟ್ ಫೈನಾನ್ಸ್, ಸಿಡಿಎಸ್ಎಲ್, ಪಿಬಿ ಫಿನ್ಟೆಕ್ ನಂತಹ ಪ್ರಮುಖ ಸಂಸ್ಥೆಗಳ ಷೇರುಗಳಲ್ಲಿಯೂ ಭಾರಿ ಚಟುವಟಿಕೆ ಕಂಡುಬರುತ್ತಿದೆ.
ನಿಫ್ಟಿ ಮತ್ತು ಬ್ಯಾಂಕ್ ನಿಫ್ಟಿ ಲೆಕ್ಕಾಚಾರ
ವಿಶ್ಲೇಷಕರ ಪ್ರಕಾರ, ನಿಫ್ಟಿಗೆ 23,200 ರಿಂದ 23,250 ಅಂಕಗಳ ವ್ಯಾಪ್ತಿಯು ಮೊದಲ ದೊಡ್ಡ ತಡೆಯಾಗಿದೆ. ನಿಫ್ಟಿ ಶುಕ್ರವಾರದ ಗರಿಷ್ಠ ಮಟ್ಟವಾದ 23,118ಕ್ಕಿಂತ ಮೇಲೆ ಸ್ಥಿರವಾಗಿ ನಿಂತರೆ, ಕೆಳಮಟ್ಟದಲ್ಲಿ 23,000 ಅಂಕಗಳ ಬೆಂಬಲ ಮಟ್ಟ ಕಾಯ್ದುಕೊಳ್ಳುವುದು ಮುಖ್ಯ ಗುರಿಯಾಗಲಿದೆ.
ಮತ್ತೊಂದೆಡೆ, ಬ್ಯಾಂಕ್ ನಿಫ್ಟಿ ಸೂಚ್ಯಂಕವು 54,500 ಅಂಕಗಳ ಮೇಲ್ಮಟ್ಟದಲ್ಲಿ ಮುಂದುವರಿದು, 54,000 ದಿಂದ 55,000 ಅಂಕಗಳ ವ್ಯಾಪ್ತಿಯ ಮೇಲ್ಭಾಗಕ್ಕೆ ಪ್ರಯಾಣ ಬೆಳೆಸಲು ಸನ್ನದ್ಧವಾಗಿದೆ. ಒಟ್ಟಾರೆಯಾಗಿ, ಈ ವಾರದ ಆರಂಭವು ಹೂಡಿಕೆದಾರರಿಗೆ ಭರ್ಜರಿ ಲಾಭದ ಮುನ್ಸೂಚನೆ ನೀಡಿದೆ.



