ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ಬಾದ್‌ಷಾ ಶಾರುಖ್ ಖಾನ್ ಅವರ ಜನ್ಮದಿನವೆಂದರೆ ಅಭಿಮಾನಿಗಳಿಗೆ ದೊಡ್ಡ ಹಬ್ಬ. ಪ್ರತಿ ವರ್ಷ ಮಧ್ಯರಾತ್ರಿ ಬಾಂದ್ರಾ ಮೂಲದ ತಮ್ಮ ‘ಮನ್ನತ್’ ಬಂಗಲೆಯ ಬಾಲ್ಕನಿಯಲ್ಲಿ ನಿಂತು ಸಾವಿರಾರು ಅಭಿಮಾನಿಗಳಿಗೆ ಶಾರುಖ್ ಕೈಬೀಸುವುದು ವಾಡಿಕೆಯಾಗಿತ್ತು. ಆದರೆ, ಈ ಬಾರಿ ಅವರು ಬೇರೆಡೆಗೆ ವಾಸ್ತವ್ಯ ಬದಲಾಯಿಸಿದ್ದರಿಂದ ಈ ಸಂಪ್ರದಾಯಕ್ಕೆ ಕೊಂಚ ತಡೆಯುಂಟಾಯಿತು. ಆದರೂ ಅಭಿಮಾನಿಗಳ ಉತ್ಸಾಹ ಕಮ್ಮಿಯಾಗಲಿಲ್ಲ, ತಮ್ಮ ಪ್ರೀತಿಯ ನಟನನ್ನು ಹಾರೈಸಲು ಮಧ್ಯರಾತ್ರಿಯೇ ಮನ್ನತ್ ಮುಂದೆ ಸಾವಿರಾರು ಜನ ನೆರೆದಿದ್ದರು.
ತಮ್ಮನ್ನು ನೋಡಲು ಬಂದ ಅಭಿಮಾನಿಗಳನ್ನು ಶಾರುಖ್ ನಿರಾಸೆಗೊಳಿಸಲಿಲ್ಲ. ಪ್ರತ್ಯಕ್ಷವಾಗಿ ಕಾಣಿಸಿಕೊಳ್ಳಲು ಸಾಧ್ಯವಾಗದಿದ್ದರೂ, ಮನ್ನತ್ ಎದುರು ಹಾಕಲಾಗಿದ್ದ ಬೃಹತ್ ಬಿಲ್‌ಬೋರ್ಡ್‌ನಲ್ಲಿ ತಮ್ಮ ಕೈಬರಹದ ವಿಶೇಷ ಸಂದೇಶವನ್ನು ಪ್ರಕಟಿಸಿದರು. “ನಿಮ್ಮೆಲ್ಲರ ಪ್ರೀತಿ ಮತ್ತು ಶುಭಾಶಯಗಳಿಗೆ ಧನ್ಯವಾದಗಳು. ನನ್ನ ಪ್ರೀತಿಯನ್ನೂ ನಿಮಗಾಗಿ ಮರಳಿ ಕಳುಹಿಸುತ್ತಿದ್ದೇನೆ,” ಎಂದು ಬರೆದು, ‘ಅಪಾರ ಪ್ರೀತಿ ಮತ್ತು ದೊಡ್ಡ ಅಪ್ಪುಗೆಯೊಂದಿಗೆ’ ಎಂದು ಶಾರುಖ್ ಸಹಿ ಮಾಡಿದ್ದರು.
ಇಷ್ಟಕ್ಕೇ ಮುಗಿಯಲಿಲ್ಲ ಅಭಿಮಾನಿಗಳ ಸಂಭ್ರಮ! ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ನಿರ್ಮಿಸುತ್ತಿರುವ ಶಾರುಖ್ ಅವರ ಮುಂಬರುವ ‘ಕಿಂಗ್’ ಚಿತ್ರದ ಪ್ರಚಾರಕ್ಕೂ ಈ ಜನ್ಮದಿನ ವೇದಿಕೆಯಾಯಿತು. ಮನ್ನತ್ ಕಟ್ಟಡದ ಮೇಲೆ ‘ಕಿಂಗ್’ ಚಿತ್ರದ ಬೃಹತ್ ವಿಷುಯಲ್ಸ್ ಹಾಗೂ “ಕಿಂಗ್ ಅಕೇಲಾ ಕಾಫಿ ಹೈ” ಮತ್ತು “ಡರ್ ನಹಿ, ದೆಹಶತ್ ಹೂಂ” ಎಂಬ ಪವರ್‌ಫುಲ್ ಸಂಭಾಷಣೆಗಳನ್ನು ಪ್ರೊಜೆಕ್ಷನ್ ಮೂಲಕ ಪ್ರದರ್ಶಿಸಲಾಯಿತು.
ಶಾರುಖ್ ಅವರ ೬೧ನೇ ಜನ್ಮದಿನದ ಅಂಗವಾಗಿ ಬಾಂದ್ರಾ-ವರ್ಲಿ ಸೀ ಲಿಂಕ್ ಅನ್ನು ಶಾರುಖ್ ಖಾನ್ ಅವರ ಭಾವಚಿತ್ರಗಳು ಮತ್ತು ಶುಭಾಶಯಗಳ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ಮಾಡಲಾಗಿತ್ತು. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಪೋಸ್ಟರ್‌ನಲ್ಲಿ ಶಾರುಖ್ “ಇಂದು ಮತ್ತೆ ನೆನಪಾಯಿತು… ಕೊಲೆಗಾರನಲ್ಲ, ಪ್ರೇಮಿ ನಾನು…” ಎಂದು ಬರೆದುಕೊಂಡು ಬಂದೂಕು ಹಿಡಿದು ಬೆಂಕಿಯ ಜ್ವಾಲೆಯಿಂದ ಹೊರಬರುವ ರಗಡ್ ಆಕ್ಷನ್ ಲುಕ್ ಪ್ರದರ್ಶಿಸಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. ಪ್ರತ್ಯಕ್ಷ ದರುಶನ ಸಿಗದಿದ್ದರೂ, ಕಿಂಗ್ ಖಾನ್ ಕೊಟ್ಟ ಈ ಸರ್ಪ್ರೈಸ್ ಬರ್ತ್‌ಡೇ ಗಿಫ್ಟ್‌ನಿಂದ ಅಭಿಮಾನಿಗಳು ಸಂಭ್ರಮದಲ್ಲಿದ್ದಾರೆ.



