ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂಗಾಳಕೊಲ್ಲಿಯಲ್ಲಿ ಮುರುಸು ಚಂಡಮಾರುತದ ಅಬ್ಬರ ಆರಂಭವಾಗಿದ್ದು, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಒಡಿಶಾ ರಾಜ್ಯಗಳಿಗೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ನಾಳೆ ಬೆಳಗ್ಗೆ ಆಂಧ್ರಪ್ರದೇಶದ ಕರಾವಳಿಗೆ ಮುರುಸು ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ನೆಲ್ಲೂರು ಹಾಗೂ ನರಸಾಪುರದ ನಡುವಿನ ಕರಾವಳಿ ಭಾಗದಲ್ಲಿ ಭೂಮಿ ಕುಸಿಯುವ ಸಾಧ್ಯತೆಯೂ ಇದೆ. ಈ ಪ್ರದೇಶದಲ್ಲಿ ಗಾಳಿಯ ವೇಗ ಗಂಟೆಗೆ 120 ಕಿ.ಮೀ.ವರೆಗೂ ಹೆಚ್ಚಾಗುವ ಸಾಧ್ಯತೆಯಿದೆ.
ಆಂಧ್ರಪ್ರದೇಶದಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆ ಇರುವ ಕಾರಣ ಹಲವು ಜಿಲ್ಲೆಗಳಿಗೆ ಹೈ ಅಲರ್ಟ್ ಘೋಷಣೆ ಮಾಡಿ ಸೂಕ್ತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ. ಒಡಿಶಾದ ದಕ್ಷಿಣ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ತಗ್ಗು ಪ್ರದೇಶದ ಜನರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಇನ್ನು ಚಂಡಮಾರುತದ ಸಾಧ್ಯತೆ ಇರುವ ಕಾರಣ ಮೀನುಗಾರರು ಸಮುದ್ರಗಳಿಗೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಇಂಡಿಗೋ ವಿಮಾನಗಳು ರದ್ದು
ಮುರಸು ಚಂಡಮಾರುತದ ಪ್ರಭಾವದಿಂದಾಗಿ, ಗನ್ನವರಂ ವಿಮಾನ ನಿಲ್ದಾಣದಿಂದ ಇಂದು ಕಾರ್ಯಾಚರಣೆ ನಡೆಸಬೇಕಿದ್ದ ಇಂಡಿಗೋ ಸಂಸ್ಥೆಯ ಹತ್ತು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಈ ವಿಮಾನ ರದ್ದತಿಯು ವಿಜಯವಾಡಕ್ಕೆ ಪ್ರಯಾಣಿಸುವ ಮತ್ತು ಅಲ್ಲಿಂದ ಹೊರಡುವ ಪ್ರಯಾಣಿಕರ ಮೇಲೆ ಪರಿಣಾಮ ಬೀರಿದೆ. ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ತೆರಳುವ ಮುನ್ನ, ವಿಮಾನಯಾನ ಸಂಸ್ಥೆಯೊಂದಿಗೆ ತಮ್ಮ ವಿಮಾನದ ಸ್ಥಿತಿಗತಿಯನ್ನು ಪರಿಶೀಲಿಸಿಕೊಳ್ಳುವಂತೆ ಸೂಚಿಸಲಾಗಿದೆ. ಚಂಡಮಾರುತದ ಭೀತಿ ಮತ್ತು ಪ್ರತಿಕೂಲ ಹವಾಮಾನ ಉಂಟಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ವಿಮಾನಯಾನ ಸಂಸ್ಥೆಯು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.



