ಹೊಸದಿಗಂತ ವರದಿ ಅಂಕೋಲಾ:
ಕೆ.ಎಲ್.ಇ ಸಮೂಹ ಸಂಸ್ಥೆಯ ಅಂಕೋಲಾ ಸ್ಥಳೀಯ ಘಟಕದ ಕಾರ್ಯದರ್ಶಿ, ಉದ್ಯಮಿ ಕಿರಣ ನಾರ್ವೇಕರ ಅವರ ಧರ್ಮಪತ್ನಿ ಡಾ.ಮೀನಲ್ ನಾರ್ವೇಕರ(78) ಅವರು ಹೃದಯಾಘಾತದಿಂದ ನಿಧನರಾದರು.
ಕೆ.ಎಲ್.ಇ ಸಂಸ್ಥೆಯ ಸದಸ್ಯೆಯಾಗಿ ತಾಲೂಕಿನಲ್ಲಿ ಸಂಸ್ಥೆಯ ಬೆಳವಣಿಗೆಗೆ ಅಪಾರ ಶ್ರಮವಹಿಸಿದ್ದ ಅವರು ಇತ್ತೀಚೆಗೆ ಸಂಸ್ಥೆಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡು ದಕ್ಷತೆಯಿಂದ ಸೇವೆ ಸಲ್ಲಿಸಿದ್ದರಲ್ಲದೇ ಸಂಸ್ಥೆಯ ನೂರಾರು ಸಿಬ್ಬಂದಿಗಳ ಗೌರವಾಧರಕ್ಕೆ ಪಾತ್ರರಾಗಿದ್ದರು. ಸುಮಾರು 40 ವರ್ಷಗಳ ಕಾಲ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಅವರು ಅಂಗನವಾಡಿ ಶಿಕ್ಷಕರ ತರಬೇತಿ ಸಂಸ್ಥೆಯ ಪ್ರಾಚಾರ್ಯರಾಗಿ, ಪದವಿ ಕಾಲೇಜ್ ಪ್ರಾಚಾರ್ಯರಾಗಿ, ಪದವಿಪೂರ್ವ ಕಾಲೇಜಿನ ಆಡಳಿತಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದರು.
ಗೋಮಾಂತಕ ಸಮಾಜ ಅಭಿವೃದ್ಧಿ ಸಂಘದ ಮೂಲಕ ಸಮಾಜದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಸಹಕಾರಕ್ಕೆ ಕೈಜೋಡಿಸಿದ್ದರಲ್ಲದೇ ಸಮಾಜದ ಬಡವರ ಆರೋಗ್ಯ ಸೇವೆಗೆ ಯಾವುದೇ ಪ್ರಚಾರವಿಲ್ಲದೇ ಕೊಡುಗೆ ನೀಡುತ್ತ ಬಂದಿದ್ದರು. ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಸಹಾಯ ಸಹಕಾರ ನೀಡುತ್ತ ಬಂದಿದ್ದರು.
ಮೃತರು ಪತಿ ಕಿರಣ ನಾರ್ವೇಕರ, ಮಗ,ಸೊಸೆ,ಮಗಳು,ಅಳಿಯ ಮತ್ತು ಅಪಾರ ಬಂಧು ಬಳಗ ಅಗಲಿದ್ದಾರೆ. ಮೃತರ ಗೌರವಾರ್ತ ಕೆ.ಎಲ್.ಇ ಶಿಕ್ಷಣ ಸಂಸ್ಥೆಯ ಎಲ್ಲಾ ವಿಭಾಗಗಳಿಗೆ ರಜೆ ಘೋಷಿಸಿ ಸಂತಾಪ ಸೂಚಿಸಲಾಯಿತು. ಸಂಸ್ಥೆಯ ಸಿಬ್ಬಂದಿಗಳು, ವಿದ್ಯಾರ್ಥಿಗಳು,ತಾಲೂಕಿನ ಗಣ್ಯರು ನೂರಾರು ಸಂಖ್ಯೆಯಲ್ಲಿ ಆಗಮಿಸಿ ಮೃತರ ಅಂತಿಮ ದರ್ಶನ ಪಡೆದರು.
ಇದನ್ನೂ ಓದಿ:
ಡಾ.ಮೀನಲ್ ನಾರ್ವೇಕರ ಅವರ ನಿಧನಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಸತೀಶ ಸೈಲ್,ಮಾಜಿ ಸಚಿವರುಗಳಾದ ಆನಂದ ಅಸ್ನೋಟಿಕರ್, ಶಿವರಾಮ ಹೆಬ್ಬಾರ, ಮಾಜಿ ಶಾಸಕಿ ರೂಪಾಲಿ ನಾಯ್ಕ,ಗೋಮಾಂತಕ ಸಮಾಜದ ಅಧ್ಯಕ್ಷ ಭಾಸ್ಕರ ನಾರ್ವೇಕರ, ದಿನಕರ ಅಂಕೋಲೆಕರ್,ಕಾಂಗ್ರೆಸ್ ಪ್ರಮುಖ ನಾಗರಾಜ ನಾರ್ವೇಕರ, ಮಹಿಳಾ ಕಾಂಗ್ರೆಸ್ಸಿನ ಕಾರ್ಯದರ್ಶಿ ಸುಜಾತಾ ಗಾಂವಕರ ಸೇರಿದಂತೆ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.



