November 3, 2026
Tuesday, November 3, 2026
spot_img

ವಿಜಯೇಂದ್ರ ಹೇಳಿಕೆಗೆ ಕಾಂಗ್ರೆಸ್ ಕಿಡಿ: ಬಿಎಸ್‌ವೈ ಮನೆ ಮುಂದೆ ಪೋಸ್ಟರ್ ಅಂಟಿಸಿ ಪ್ರತಿಭಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಏಕವಚನದಲ್ಲಿ ಬಳಸಿದ್ದಾರೆನ್ನಲಾದ ವಿವಾದಾತ್ಮಕ ಪದಪ್ರಯೋಗ ರಾಜಕೀಯ ವಲಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಬಿ.ವೈ. ವಿಜಯೇಂದ್ರ ಅವರ ನಿವಾಸಗಳ ಮುಂದೆ ಪೋಸ್ಟರ್ ಅಂಟಿಸುವ ಮೂಲಕ ವಿಭಿನ್ನ ಪ್ರತಿಭಟನೆಗೆ ಕೈಹಾಕಿದ್ದಾರೆ.

ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಕೋಲಾಹಲ ಜೋರಾಗಿರುವ ಬೆನ್ನಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಾಗ್ದಾಳಿ ತಾರಕಕ್ಕೇರಿದೆ. ದಾವಣಗೆರೆಯಲ್ಲಿ ಸರ್ಕಾರದ ಮೀಸಲಾತಿ ಹೆಚ್ಚಳದ ಪ್ರಕರಣಗಳು ಹಾಗೂ ಹಾಲಿನ ದರ ಏರಿಕೆಯ ಕುರಿತು ಮಾತನಾಡುವಾಗ ವಿಜಯೇಂದ್ರ ಅವರು, “ಈ ನನ್ ಮಕ್ಕಳು ಕಾಂಗ್ರೆಸ್ ನವರು ಇದ್ದಾರಲ್ಲಾ…” ಎಂದು ಏಕವಚನದಲ್ಲೇ ಆಕ್ರೋಶ ಹೊರಹಾಕಿದ್ದರು. ವಿಜಯೇಂದ್ರ ಅವರು ವಾಗ್ದಾಳಿ ನಡೆಸಿದ ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಯಡಿಯೂರಪ್ಪ ನಿವಾಸದ ಮುಂದೆ ಪೋಸ್ಟರ್ ಪ್ರತ್ಯಕ್ಷ

ವಿಜಯೇಂದ್ರ ಅವರ ಈ ಹೇಳಿಕೆಯಿಂದ ತೀವ್ರ ಆಕ್ರೋಶಗೊಂಡಿರುವ ಕಾಂಗ್ರೆಸ್ ಕಾರ್ಯಕರ್ತರು ತಕ್ಷಣವೇ ಕ್ಷಮೆ ಕೇಳುವಂತೆ ಪಟ್ಟು ಹಿಡಿದಿದ್ದಾರೆ. ಬೆಂಗಳೂರಿನಲ್ಲಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ನಿವಾಸ ಹಾಗೂ ಬಿ.ವೈ ವಿಜಯೇಂದ್ರ ಅವರ ಮನೆ ಬಳಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಬಹಿರಂಗವಾಗಿಯೇ  ಪೋಸ್ಟರ್ ಅಂಟಿಸಿದ್ದಾರೆ. ಈ ಪೋಸ್ಟರ್ ವಾರ್‌ನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಅವಹೇಳನಕಾರಿ ಮಾತುಗಳನ್ನಾಡಿರುವ ವಿಜಯೇಂದ್ರ ಅವರು ಕೂಡಲೇ ಕ್ಷಮೆಯಾಚಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

ಇದನ್ನೂ ಓದಿ;

ಬಿ.ಕೆ. ಹರಿಪ್ರಸಾದ್ ನೀಡಿದ 3 ದಿನಗಳ ಡೆಡ್‌ಲೈನ್

ಈ ವಿವಾದದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ಪ್ರಮುಖ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಬಿಜೆಪಿಗೆ ನೇರ ಎಚ್ಚರಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ವಿರುದ್ಧ ‘ನನ್ನ ಮಕ್ಕಳು’ ಎಂಬ ಕೀಳು ಪದಪ್ರಯೋಗ ಮಾಡಿದ್ದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮುಂದಿನ ಮೂರು ದಿನಗಳ ಒಳಗಾಗಿ ಬಹಿರಂಗ ಕ್ಷಮೆ ಕೇಳಬೇಕು ಎಂದು ಗಡುವು ನೀಡಿದ್ದಾರೆ. ಒಂದು ವೇಳೆ ನಿಗದಿತ ಸಮಯದೊಳಗೆ ಕ್ಷಮೆಯಾಚಿಸದಿದ್ದರೆ, ಕಾಂಗ್ರೆಸ್ ಕಾರ್ಯಕರ್ತರು ವಿಜಯೇಂದ್ರ ಅವರಿಗೆ ಕಪ್ಪು ಪಟ್ಟಿ ಪ್ರದರ್ಶಿಸಿ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ.

Must Read