ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ನಡೆಯುತ್ತಿರುವ ಕೆಲವು ಅಪರಾಧ ಕೃತ್ಯಗಳು ಕೇವಲ ಕಾನೂನು ಸುವ್ಯವಸ್ಥೆಯ ಪ್ರಶ್ನೆಯನ್ನಷ್ಟೇ ಅಲ್ಲ, ಬದಲಿಗೆ ನಮ್ಮ ಸಾಮೂಹಿಕ ಮಾನಸಿಕತೆಯ ಬಗ್ಗೆಯೂ ಗಂಭೀರ ಆತಂಕ ಮೂಡಿಸುತ್ತಿವೆ. ಒಂದೇ ರೀತಿಯ ಗಂಭೀರ ತಪ್ಪುಗಳು ಅಥವಾ ಅಪರಾಧಗಳು ನಡೆದಾಗ, ಆರೋಪಿಯ ಲಿಂಗವನ್ನು (ಗಂಡು ಅಥವಾ ಹೆಣ್ಣು) ಆಧರಿಸಿ ಸಮಾಜ ಪ್ರತಿಕ್ರಿಯಿಸುವ ರೀತಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಬಾಲಕನ ಪ್ರಕರಣ: ತೀವ್ರ ಆಕ್ರೋಶ, ಕಠಿಣ ಕ್ರಮ
ಇತ್ತೀಚೆಗೆ ನಡೆದ ಒಂದು ಘಟನೆಯಲ್ಲಿ 8 ವರ್ಷದ ಬಾಲಕನೊಬ್ಬ 6 ವರ್ಷದ ಬಾಲಕಿ ಮೇಲೆ ತೀವ್ರ ಹಲ್ಲೆ ನಡೆಸಿದ ದಾರುಣ ಘಟನೆ ವರದಿಯಾಗಿದೆ. ಈ ಘಟನೆ ನಡೆದ ತಕ್ಷಣ ಇಡೀ ಸಮಾಜ ಒಂದಾಗಿ ಧ್ವನಿ ಎತ್ತಿತು. ಎಲ್ಲರೂ ಆ ಬಾಲಕಿ ಬೇಗ ಗುಣಮುಖಳಾಗಲಿ ಎಂದು ಪ್ರಾರ್ಥಿಸಿದರು.
ಅದೇ ಸಮಯದಲ್ಲಿ, ತಪ್ಪಿತಸ್ಥ ಬಾಲಕನಿಗೆ ಶಿಕ್ಷೆಯಾಗಬೇಕು ಹಾಗೂ ಇದಕ್ಕೆ ಕಾರಣರಾದ ಶಿಕ್ಷಕರು, ಪ್ರಿನ್ಸಿಪಾಲ್ ಮತ್ತು ಸೆಕ್ಯೂರಿಟಿ ಗಾರ್ಡ್ ಅಮಾನತುಗೊಳಿಸಬೇಕೆಂದು ಒತ್ತಾಯಿಸಲಾಯಿತು. ಅಂತೆಯೇ, ಆ ಬಾಲಕನನ್ನು ಬಾಲಮಂದಿರಕ್ಕೆ ಕಳುಹಿಸಲಾಯಿತು. ಆದರೆ, ಇದರ ಜೊತೆಗೆ ಕೆಲವು ಕಡೆ ಇಡೀ ಗಂಡು ಜನಾಂಗವನ್ನೇ ಬಾಲ್ಯದಿಂದಲೇ ಅಪರಾಧಿಗಳಂತೆ ಬಿಂಬಿಸುವ ಧೋರಣೆಯೂ ಕಂಡುಬಂತು.
ಮತ್ತೊಂದು ಆಘಾತಕಾರಿ ಘಟನೆ
ಇದಕ್ಕೆ ತದ್ವಿರುದ್ಧವಾಗಿ, ಇದೇ ಅವಧಿಯಲ್ಲಿ ನಡೆದ ಮತ್ತೊಂದು ಘಟನೆಯ ಬಗ್ಗೆ ಸಮಾಜದಲ್ಲಿ ಯಾವುದೇ ಸದ್ದು ಕೇಳಿಬರುತ್ತಿಲ್ಲ. ಕೇವಲ ಎರಡು ದಿನಗಳ ಹಿಂದೆ, 12 ವರ್ಷದ ಬಾಲಕಿಯೊಬ್ಬಳು 4 ವರ್ಷದ ಕಂದಮ್ಮನೊಬ್ಬನಿಗೆ ಸಂಬಂಧಿಸಿದ ವಿಚಾರಕ್ಕಾಗಿ ದ್ವೇಷ ಸಾಧಿಸಿದ್ದಾಳೆ.
ಚಿಕ್ಕ ಬಾಲಕನೊಬ್ಬ ಚಾಕೋಲೇಟ್ ಪಡೆದಿದ್ದಕ್ಕೆ ಆ ಬಾಲಕನ ತಾಯಿ ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಸಿಟ್ಟಿನಲ್ಲಿ ಆ ಬಾಲಕಿ ಸುಮಾರು 10-12 ದಿನಗಳ ಕಾಲ ಹಗೆ ತೀರಿಸಿಕೊಳ್ಳಲು ಸಂಚು ರೂಪಿಸಿದ್ದಾಳೆ. ಅಕ್ಟೋಬರ್ 28ರಂದು ಆಕೆ ತನ್ನ ಕ್ರೂರ ಯೋಜನೆಯನ್ನು ಕಾರ್ಯರೂಪಕ್ಕೆ ತಂದು, ಆ ಮಗುವನ್ನು ಮೇಲ್ಛಾವಣಿಯ ನೀರಿನ ಟ್ಯಾಂಕ್ ಒಳಗೆ ಹಾಕಿ ಮೇಲೆ ಭಾರವಾದ ಕಲ್ಲನ್ನು ಇಟ್ಟಿದ್ದಾಳೆ. ಪರಿಣಾಮವಾಗಿ ಆ ಹಸುಗೂಸು ಉಸಿರುಗಟ್ಟಿ ಸಾವನ್ನಪ್ಪಿದೆ.
ಸಮಾಜದ ದ್ವಂದ್ವ ನೀತಿ
ಆಶ್ಚರ್ಯವೆಂದರೆ, ಮೊದಲ ಘಟನೆಯಂತೆ ಈ ಎರಡನೇ ಘಟನೆಯ ಬಗ್ಗೆಯೂ ಯಾವುದೇ ದೊಡ್ಡ ಮಟ್ಟದ ಚರ್ಚೆಗಳು, ಆಕ್ರೋಶಗಳು ಅಥವಾ ವಿಶ್ಲೇಷಣೆಗಳು ನಡೆಯುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಆರೋಪಿ ಹೆಣ್ಣು ಮಗು ಎಂಬ ಅಂಶವಾಗಿರುವುದು ಆತಂಕಕಾರಿ ವಿಷಯ.
ಅಪರಾಧ ಎನ್ನುವುದು ಅಪರಾಧವೇ ಹೊರತು, ಅದನ್ನು ಮಾಡುವವರ ಲಿಂಗವನ್ನು ನೋಡಿ ವಿರೋಧಿಸುವುದು ಅಥವಾ ಮೌನವಾಗಿರುವುದು ನ್ಯಾಯಸಮ್ಮತವಲ್ಲ. ಬಾಲಕನ ಕೃತ್ಯವನ್ನು ತೀವ್ರವಾಗಿ ಖಂಡಿಸುವ ಸಮಾಜ, ಬಾಲಕಿಯೊಬ್ಬಳು ನಡೆಸಿದ ಪೂರ್ವಯೋಜಿತ ಕೊಲೆಯ ಬಗ್ಗೆ ಮೌನ ವಹಿಸುವುದು ಏಕೆ? ಇದು ಸಮಾಜದ ಕಣ್ಣುಮುಚ್ಚಿಡುವ ತಂತ್ರ ಮತ್ತು ಸ್ಪಷ್ಟ ದ್ವಂದ್ವ ನೀತಿಯನ್ನು ಎತ್ತಿ ತೋರಿಸುತ್ತದೆ.
ಮಕ್ಕಳು ತಪ್ಪು ದಾರಿಯಲ್ಲಿ ಸಾಗುತ್ತಿರುವುದಕ್ಕೆ ಅವರ ಸುತ್ತಲಿನ ವಾತಾವರಣ, ಬೆಳೆವಣಿಗೆಯ ಶೈಲಿ ಮತ್ತು ಆಧುನಿಕ ಜೀವನಶೈಲಿಯೂ ಕಾರಣವಾಗಿರಬಹುದು. ಹಾಗಾಗಿ, ಅಪರಾಧ ಎಸಗಿದವರು ಯಾರೇ ಆಗಿರಲಿ ಹುಡುಗನಾಗಿರಲಿ ಅಥವಾ ಹುಡುಗಿಯಾಗಿರಲಿ ಅವರಿಗೆ ಸರಿಯಾದ ತಿದ್ದುವಿಕೆ, ಕೌನ್ಸಿಲಿಂಗ್ ಮತ್ತು ಕಾನೂನು ಕ್ರಮ ಅನಿವಾರ್ಯ. ಕೇವಲ ಲಿಂಗದ ಆಧಾರದ ಮೇಲೆ ಒಂದು ಕೃತ್ಯವನ್ನು ದೊಡ್ಡದು ಮಾಡುವುದು ಅಥವಾ ಮತ್ತೊಂದನ್ನು ಮುಚ್ಚಿಹಾಕುವುದು ಸಮಾಜದ ಲಕ್ಷಣವಲ್ಲ. ಲಿಂಗ ತಾರತಮ್ಯವನ್ನು ಬದಿಗಿಟ್ಟು, ಯಾವುದೇ ಅಪರಾಧವನ್ನು ಸಮಾನ ದೃಷ್ಟಿಯಿಂದ ನೋಡುವ ಮಾನವೀಯ ದೃಢತೆ ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿದೆ.



