ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್‌ನ ಅಹಮದಾಬಾದ್‌ನಲ್ಲಿ ವ್ಯಕ್ತಿಯೊಬ್ಬ ತನ್ನ ಹತ್ತು ವರ್ಷದ ಮಗುವಿನ ತಲೆ ಕಡಿದು ತದನಂತರ ಮೃತದೇಹದ ಪಕ್ಕದಲ್ಲಿಯೇ ಮಲಗಿದ್ದಾನೆ.
ಹತ್ತು ವರ್ಷದ ಮಗ ಕರಣ್‌ನನ್ನು ಮನೆಯಲ್ಲಿದ್ದ ದೇವರ ಪೀಠಕ್ಕೆ ನರಬಲಿ ನೀಡಿದ್ದಾರೆ. ಮಗನ ಹಣೆಯನ್ನು ಪೀಠಕ್ಕೆ ಜಜ್ಜಿ ಕೊಲೆ ಮಾಡಿ ನಂತರ ಅವನ ಪಕ್ಕದಲ್ಲಿಯೇ ಮಲಗಿ ರಾತ್ರಿ ಕಳೆದಿದ್ದಾನೆ. ಆರೋಪಿ ನರೇಶ್ ಪಾಟೀಲ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ನರೇಶ್ ಮನೆಯಲ್ಲಿ ಮಗನ ಜೊತೆ ವಾಸವಿದ್ದ. ಪತಿ ಜೊತೆ ಜಗಳ ಮಾಡಿಕೊಂಡಿದ್ದ ಭಾರತೀಬೆನ್ ಮಗನನ್ನು ಬಿಟ್ಟು ತವರುಮನೆ ಸೇರಿಕೊಂಡಿದ್ದರು. ಭುವಾ ಸಮುದಾಯದಲ್ಲಿ, ಸಮುದಾಯ ಹಾಗೂ ದೇವತೆಗಳ ನಡುವೆ ಒಬ್ಬ ವ್ಯಕ್ತಿ ಮಧ್ಯವರ್ತಿಯಾಗಿರುತ್ತಾನೆ. ಆತ ಎಲ್ಲ ರೀತಿಯ ಸಾಂಪ್ರದಾಯಿಕ ಆಚರಣೆಗಳನ್ನು ಮಾಡಬೇಕಾಗುತ್ತದೆ. ಮಗ ಈ ಮಧ್ಯವರ್ತಿ ಆಗಬಾರದು ಎನ್ನುವ ಕಾರಣಕ್ಕೆ ಕೊಲೆ ಮಾಡಿದ್ದೇನೆ ಎಂದು ನರೇಶ್ ಪತ್ನಿ ಭಾರತಿಗೆ ಹೇಳಿದ್ದಾನೆ.
ಮಾನಸಿಕ ಅಸ್ವಸ್ಥನಾದ ನರೇಶ್ ಜೊತೆ ಇರಲಾರದೇ ಭಾರತೀ ಮನೆ ಬಿಟ್ಟು ತಾಯಿಯ ಮನೆಗೆ ಹೋಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ತಾಯಿಯ ಮನೆಗೆ ಹೋಗುವಾಗ ಮಗನನ್ನು ಕರೆದುಕೊಂಡು ಹೋಗುವ ಆಲೋಚನೆ ಮಾಡಿದ್ದೆ. ಆದರೆ ಶಾಲೆಯ ಫೀಸ್ ಕಟ್ಟಿತ್ತು. ಶಾಲೆಗೆ ಕಳಿಸುವ ಕಾರಣದಿಂದ ಅಲ್ಲಿಯೇ ಬಿಟ್ಟು ಬಂದೆ. ಆದರೆ ಮಗನನ್ನು ರಕ್ತದ ಮಡುವಿನಲ್ಲಿ ನೋಡಿ ಕರುಳು ಕಿತ್ತುಬಂದಂತಾಯಿತು ಎಂದು ಭಾರತಿ ಕಣ್ಣೀರಿಟ್ಟಿದ್ದಾರೆ.
ಮನೆಗೆ ಬಂದು ನೋಡಿದಾಗ ಮಗ ರಕ್ತದಲ್ಲಿ ಮುಳುಗಿದ್ದ, ಪಕ್ಕದಲ್ಲಿಯೇ ಪತಿ ಮಲಗಿಕೊಂಡಿದ್ದ ಏನಾಯ್ತು ಎಂದು ಹೇಳಿದ್ದಕ್ಕೆ ನನ್ನ ತಂದೆ ದೇವತೆಯ ಭುವಾ ಆಗಿದ್ದರು. ಅದಕ್ಕೆ ನಾನು ಭುವಾ ಆಗಬೇಕಾಯಿತು. ನನ್ನ ನಂತರ ಮಗ ಭುವಾ ಆಗಬೇಕಿತ್ತು. ಆದರೆ ಈ ಪದ್ಧತಿ ನನ್ನಲ್ಲೇ ಕೊನೆ ಆಗಬೇಕಿತ್ತು. ಅದಕ್ಕೆ ಮಗನನ್ನು ಕೊಂದೆ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ.



